ಮಂಡ್ಯ : ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ, ಕೆಆರ್ ಎಸ್ ಡ್ಯಾಂಗೆ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ಕೆ.ಆರ್. ಎಸ್ ಡ್ಯಾಂನ ನೀರಿನ ಮಟ್ಟ 100 ಅಡಿ ತಲುಪಿದೆ. ಒಂದೂವರೆ ತಿಂಗಳಿಂದ ಮಳೆಯಿಲ್ಲದೆ ಕಂಗಾಲಾಗಿದ್ದ ಸಕ್ಕರೆ ನಾಡಿನ ಅನ್ನದಾತರು ಸಂತಸಗೊಂಡಿದ್ದಾರೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಎರಡನೇ ದಿನದಲ್ಲಿ ಕೆ.ಆರ್ ಎಸ್ ಡ್ಯಾಂ 8 ಅಡಿ ಭರ್ತಿಯಾಗಿದೆ. ಕೆ.ಆರ್.ಎಸ್ ಒಳಹರಿವಿನ ಪ್ರಮಾಣವೂ ಹೆಚ್ಚಾಗುತ್ತಿದೆ. 124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಕೆ.ಆರ್.ಎಸ್ ಸದ್ಯ 100 ಅಡಿ ತಲುಪಿದೆ.
ಡ್ಯಾಂ ಭರ್ತಿಯತ್ತ ಸಾಗುತ್ತಿರುವುದಕ್ಕೆ ಮಂಡ್ಯ ಜಿಲ್ಲೆ ರೈತರಲ್ಲಿ ಮಂದಹಾಸ ಮೂಡಿಸಿದ್ದು, ಇದೀಗ ಕೃಷಿ ಚಟುವಟಿಕೆಗಳತ್ತ ಮುಖ ಮಾಡಿದ್ದಾರೆ. ಸದ್ಯ ಡ್ಯಾಂಗೆ 48,025 ಕ್ಯೂಸೆಕ್ ಒಳ ಹರಿವು ಬರುತ್ತಿದ್ದು, ಮಧ್ಯಾಹ್ನದ ವೇಳೆಗೆ ಒಳ ಹರಿವಿನ ಪ್ರಮಾಣ ಮತ್ತಷ್ಟು ಏರಿಕೆ ಸಾಧ್ಯತೆ ಇದೆ. 48 ಗಂಟೆಯಲ್ಲಿ 5 ಟಿಎಂಸಿ ನೀರು ಹರಿದು ಬಂದಿದೆ. 49.452 ಟಿಎಂಸಿ ಗರಿಷ್ಠ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಸದ್ಯ ಡ್ಯಾಂನಲ್ಲಿ 22.809 ಟಿಎಂಸಿ ನೀರು ಶೇಖರಣೆ ಇದೆ. ಇದೇ ರೀತಿ ಒಳ ಹರಿವು 10 ದಿನದಲ್ಲಿ ಸಂಪೂರ್ಣ ಭರ್ತಿ ಸಾಧ್ಯತೆ.