ಬೆಂಗಳೂರು: ನೇಕಾರರಿಗೆ 20 ಹೆಚ್‌ಪಿವರೆಗೂ ಉಚಿತವಾಗಿ ವಿದ್ಯುತ್ ನೀಡುವ ಚಿಂತನೆ ಸರ್ಕಾರಕ್ಕಿದ್ದು ಎರಡು ದಿನಗಳಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ಜವಳಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.
ರಾಜ್ಯ ದೇವಾಂಗ ಸಂಘದಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದೆರಡು ದಿನಗಳಲ್ಲಿ ಸಭೆ ನಡೆಸಿ 20 ಹೆಚ್.ಪಿ.ವರೆಗೆ ನೇಕಾರರಿಗೆ ಉಚಿತ ವಿದ್ಯುತ್ ನೀಡಲು ತೀರ್ಮಾನ ಕೈಗೊಳ್ಳಲಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಈ ಬಗ್ಗೆ ಭರವಸೆ ನೀಡಲಾಗಿತ್ತು. ಅದನ್ನು ಈಡೇರಿಸಲಾಗುವುದು ಎಂದು ಹೇಳಿದ್ದಾರೆ.
ಗುರುತಿನ ಚೀಟಿ ನೀಡುವ ಪ್ರಕ್ರಿಯೆ ಕಾರ್ಯರೂಪದಲ್ಲಿದ್ದು, ಅದನ್ನು ವರ್ಷದಲ್ಲಿ ಪೂರ್ಣಗೊಳಿಸಲಾಗುವುದು. ನೇಕಾರರ ಅಭಿವೃದ್ಧಿ ನಿಗಮ ರಚನೆಯಾಗಿದ್ದು, ನಿಗಮಕ್ಕೆ ಆರ್ಥಿಕ ಶಕ್ತಿ ನೀಡಲಾಗುವುದು. ನೇಕಾರರಿಗೆ ಮನೆಗಳನ್ನು ನೀಡಬೇಕೆಂಬ ಬೇಡಿಕೆಯನ್ನು ಈಡೇರಿಸಲಾಗುವುದು ಎಂದು ತಿಳಿಸಿದ್ದಾರೆ.