ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಡಿಪ್ಲೋಮಾ, ಪದವೀಧರರಿಗೆ ತಲಾ 1,500 ರೂ. ಹಾಗೂ 3,000 ರೂ. ನೀಡುವ ಯುವನಿಧಿ ಯೋಜನೆಯನ್ನು ಡಿಸೆಂಬರ್ ನಲ್ಲಿ ಜಾರಿ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಆಯೋಜಿಸಿದ್ದ ರಾಜ್ಯ ಶ್ರೇಷ್ಠ ರಪ್ತು ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಐದನೇ ಗ್ಯಾರಂಟಿಯಾಗಿ ಯುವನಿಧಿ ಯೋಜನೆ ಘೋಷಿಸಲಾಗಿದ್ದು, ಅದರಂತೆ 2022-23 ರಲ್ಲಿ ಪದವೀಧರರಾಗಿ ಹೊರಬಂದು ನಿರುದ್ಯೋಗಿಗಳಾದಲ್ಲಿ ಅವರಿಗೆ ಮೂರು ಸಾವಿರ ರೂ. ಭತ್ಯೆ ಹಾಗೂ ಡಿಪ್ಲೋಮಾ ಪದವೀಧರರಿಗೆ 1,500 ರೂ, ಭತ್ಯೆ ನೀಡುವ ಯೋಜನೆಯನ್ನು ಡಿಸೆಂಬರ್ ನಿಂದ ಜಾರಿ ತರಲಾಗುವುದು ಎಂದರು.
ಯುವನಿಧಿ ಯೋಜನೆಯಡಿ ವೃತ್ತಿಪರ ಕೋರ್ಸ್, ಪದವಿ, ಡಿಪ್ಲೋಮಾ ಪದವಿ ಪಡೆದವರಿಗೆ ಅನ್ವಯವಾಗಲಿದೆ. ಪದವಿ ಪಡೆದ 6 ತಿಂಗಳಲ್ಲಿ ಯಾವುದೇ ಉದ್ಯೋಗ ಸಿಗದೇ ಇದ್ದಲ್ಲಿ ಮುಂದಿನ 24 ತಿಂಗಳ ಅವಧಿಗೆ ಪದವೀಧರರಿಗೆ 3,000 ರೂ. ಮತ್ತು ಡಿಪ್ಲೋಮಾ ಪದವೀಧರರಿಗೆ ಮಾಸಿಕ 1,500 ರೂ. ನೀಡಲಾಗುವುದು ಎಂದು ತಿಳಿಸಿದ್ದಾರೆ.