ಶಿವಮೊಗ್ಗ : ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷಗಳು ಬುಸುಗುಡುತ್ತಿರುವ ಹೊತ್ತಲ್ಲೇ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅಚ್ಚರಿ ಹೇಳಿಕೆ ನೀಡಿದ್ದಾರೆ. ಅವಧಿಗೂ ಮುನ್ನವೇ ಮತ್ತೆ ವಿಧಾನಸಭೆ ಚುನಾವಣೆ ಬರಬಹುದು ಎಂದು ಈಶ್ವರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಜನವಿರೋಧಿ ಕಾಂಗ್ರೆಸ್ ಸರ್ಕಾರ ಇದ್ದು, ಅವಧಿಗೂ ಮುನ್ನವೇ ಮತ್ತೆ ವಿಧಾನಸಭೆ ಚುನಾವಣೆ ಬರಬಹುದು ಎಂದು ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಬಿ.ಕೆ.ಹರಿಪ್ರಸಾದ್ ಸೇರಿ ಹಲವರು ಕಾಂಗ್ರೆಸ್ ವಿರುದ್ಧ ತಿರುಗಿ ಬೀಳಲಿದ್ದಾರೆ. ಇವರೆಲ್ಲರೂ ಸೇರಿಕೊಂಡು ಸಿದ್ದರಾಮಯ್ಯರನ್ನು ಅಧಿಕಾರದಿಂದ ಕೆಳಗಿಳಿಸಲಿದ್ದಾರೆ ಎಂದರು.
ಸಿಎಂ ಆಯ್ಕೆ ಮಾಡೋದು ಗೊತ್ತು, ಕೆಳಗೆ ಇಳಿಸೋದು ಗೊತ್ತ’ ಎಂಬ ಎಂಎಲ್ ಸಿ ಬಿ.ಕೆ.ಹರಿಪ್ರಸಾದ್ ಹೇಳಿಕೆ ರಾಜ್ಯ ಕಾಂಗ್ರೆಸ್ ನಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ನಡುವೆ ಬಿ.ಕೆ.ಹರಿಪ್ರಸಾದ್ ತಮ್ಮ ಹೇಳಿಕೆ ಹಾಗೂ ಸಿಎಂ ವಿರುದ್ಧ ಅಸಮಾಧಾನದ ಬಗ್ಗೆ ಒಪ್ಪಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಕೆ.ಹರಿಪ್ರಸಾದ್, ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅಸಮಾಧಾನವಿರುವುದು ನಿಜ. ಸ್ವಲ್ಪ ಕಾದು ನೋಡಿ. ರಾಜಕಾರಣದಲ್ಲಿ ಮುಂದೆ ಏನೆಲ್ಲ ಆಗಲಿದೆ ಎಂಬುದನ್ನು ಎಂದು ಮಾರ್ಮಿಕವಾಗಿ ನುಡಿದರು.ಇದೇ ವೇಳೆ ನನಗೆ ಸಿಎಂ ಆಯ್ಕೆ ಮಾಡೋದು ಗೊತ್ತು, ಕೆಳಗೆ ಇಳಿಸೋದು ಗೊತ್ತು ಎಂಬ ಹೇಳಿಕೆ ವಿಚಾರವಾಗಿ, ನನ್ನ ಹೇಳಿಕೆ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ಕೊಡಲ್ಲ. ಹೇಳಿದ ಮೇಲೆ ಅದನ್ನು ವಾಪಸ್ ತೆಗೆದುಕೊಳ್ಳುವ ಜಾಯಮಾನ ನನ್ನದಲ್ಲ. ಹೇಳಿದಿನಿ ಅಂದ್ರೆ ಹೇಳಿದಿ ಅಷ್ಟೇ ಎಂದು ಹೇಳಿದ್ದಾರೆ.