ಬೆಂಗಳೂರು : 2 ತಿಂಗಳಲ್ಲಿ ಅಪರಾಧ ಪ್ರಮಾಣ 35 % ಹೆಚ್ಚಳ ವಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ಧಾಳಿ ನಡೆಸಿದೆ.
ಗ್ಯಾರಂಟಿಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸರ್ಕಾರ ಇಲ್ಲಿಯವರೆಗೂ ವರ್ಗಾವಣೆ ದಂಧೆಯಲ್ಲಿ ಮಾತ್ರ ನಿರತವಾಗಿದೆ ಹೊರತು ರಾಜ್ಯದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಈ ತುಘಲಕ್ ಸರ್ಕಾರ ಆಡಳಿತಕ್ಕೆ ಬಂದಿದ್ದೇ ತಡ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ರಾಜ್ಯದ ಕ್ರೈಂ ರೇಟ್ ಶೇ.35 ರಷ್ಟು ಹೆಚ್ಚಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಾಲಮುಚ್ಚಿಕೊಂಡಿದ್ದ ಸಮಾಜಘಾತುಕ ಶಕ್ತಿಗಳು, ಈಗ ಸಂಪೂರ್ಣ ಬಾಲ ಬಿಚ್ಚಿದ್ದು, ರಾಜ್ಯದಲ್ಲಿ ಕೊಲೆ, ಸುಲಿಗೆ, ದರೋಡೆ ಪ್ರಕರಣಗಳು ಸಾಮಾನ್ಯವಾಗಿವೆ ಎಂದು ವಾಗ್ಧಾಳಿ ನಡೆಸಿದೆ.
ಪೊಲೀಸರ ಮೇಲೆ ಹಲ್ಲೆ, ಹಿಂದೂ ಕಾರ್ಯಕರ್ತರ ಕೊಲೆ, ಜೈನ ಮುನಿಗಳ ಅಮಾನುಷ ಹತ್ಯೆ, ಹಾಡುಹಗಲೇ ಅತ್ಯಾಚಾರ ಪ್ರಕರಣಗಳು, ಭಯೋತ್ಪಾದಕರ ಸಂಚು ಹೀಗೆ ಸಾಲು ಸಾಲು ಅಪರಾಧ ಪ್ರಕರಣಗಳು ಜರುಗುತ್ತಿದ್ದರೂ, ಸರ್ಕಾರ ಮಾತ್ರ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕುಳಿತಿದೆ. ರಾಜ್ಯದೆಲ್ಲೆಡೆ ಮಳೆ ಇಲ್ಲದೇ, ಬರ ತಾಂಡವವಾಡುತ್ತಿದ್ದು, ಬೆಳೆ ಹಾಗೂ ಬೆಲೆ ಇಲ್ಲದೇ ಅನ್ನದಾತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ರಾಜ್ಯದಲ್ಲಿ ಈ ಸರ್ಕಾರ ಬಂದ ಎರಡು ತಿಂಗಳೊಳಗೆ ಒಟ್ಟು 46 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು, ಈ ಸರ್ಕಾರದ ರೈತ ವಿರೋಧಿ ಧೋರಣೆಯನ್ನು ಪ್ರದರ್ಶಿಸುತ್ತದೆ.
ಸಂವಿಧಾನ ರಕ್ಷಕರು ಎಂದು ತಮಗೆ ತಾವೇ ಸರ್ಟಿಫಿಕೇಟ್ ಕೊಟ್ಟುಕೊಳ್ಳುವ ಈ ಸರ್ಕಾರದ ಪ್ರತಿನಿಧಿಗಳು, ಅಧಿಕಾರಕ್ಕೆ ಬಂದ ನಂತರ ಸಂವಿಧಾನಕ್ಕೆ ಹಾಗೂ ಸಾಂವಿಧಾನಿಕ ಹುದ್ದೆಗಳಿಗೆ ಕನಿಷ್ಠ ಗೌರವವನ್ನು ಸಹ ನೀಡುತ್ತಿಲ್ಲ. ರಾಜ್ಯದ ಹಿರಿಯ ಐ.ಎ.ಎಸ್ ಅಧಿಕಾರಿಗಳನ್ನು ತಮ್ಮ ಪಕ್ಷದ ಕೆಲಸಕ್ಕೆ ನೇಮಿಸಿಕೊಂಡು, ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಸಭಾಪತಿಗಳು ತಮ್ಮ ಹುದ್ದೆಯ ಘನತೆಯನ್ನು ಮರೆತು ರಾಜಕೀಯ ಔತಣಕೂಟದಲ್ಲಿ ಭಾಗಿಯಾಗಿದ್ದಾರೆ. ಇದನ್ನು ಸದನದಲ್ಲಿ ಪ್ರಶ್ನಿಸಿದ ಶಾಸಕರನ್ನು ಏಕಾಏಕಿ ಅಮಾನತು ಮಾಡುವ ಮೂಲಕ, ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡಿದ್ದಾರೆ.
ಇನ್ನು ಈ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ತಾವು ಘೋಷಿಸಿದ್ದ ಸುಳ್ಳು ಗ್ಯಾರಂಟಿಗಳ ಅನುಷ್ಠಾನಕ್ಕಾಗಿ ರಾಜ್ಯದ ಜನತೆಯ ಮೇಲೆ ತೆರಿಗೆ ಏರಿಕೆಯನ್ನು ಹೇರಿದ್ದು, ತರಕಾರಿ, ದಿನಸಿ ಸಾಮಗ್ರಿ, ಹಾಲು, ಹಣ್ಣು-ಹಂಪಲು, ಮೊಟ್ಟೆ, ಮಾಂಸ ಸೇರಿ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ಜನತೆ ಜೀವನ ನಡೆಸುವುದೇ ದುಸ್ತರವಾಗಿದೆ. ಆದರೆ ಬೆಲೆಯೇರಿಕೆ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿದ್ದ ಸರ್ಕಾರ, ತನ್ನ ವರ್ಗಾವಣೆಯ ದಂಧೆಯ ರೇಟನ್ನು ಏರಿಸಿಕೊಂಡು, ತನ್ನ ಹಾಗೂ ದೆಹಲಿಯ ಕಲೆಕ್ಷನ್ ಏಜೆಂಟ್ಗಳ ಜೇಬನ್ನು ತುಂಬಿಸುತ್ತಿದೆ.
ಸಿಲಿಕಾನ್ ಸಿಟಿ, ಸ್ಟಾರ್ಟಪ್ಗಳ ತವರೂರು, ಐಟಿ ಸಿಟಿ ಎಂದು ಜಗತ್ತಿನಲ್ಲಿಯೇ ಬ್ರಾಂಡ್ ಆಗಿರುವ ಬೆಂಗಳೂರಿನಲ್ಲಿ ಈ ಸರ್ಕಾರ ಬಂದ ನಂತರ, ಉಗ್ರಗಾಮಿಗಳ ಚಟುವಟಿಕೆ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಯೋಜನೆ ರೂಪಿಸಿದ್ದ ಭಯೋತ್ಪಾದಕರು ಸಾಕ್ಷಿ ಸಮೇತ ಸಿಕ್ಕಿಬಿದ್ದಿದ್ದಾರೆ. ಆದರೆ ಸೆರೆ ಸಿಕ್ಕ ಭಯೋತ್ಪಾದಕರನ್ನು, ಭಯೋತ್ಪಾದಕರು ಎಂದು ಹೇಳಲು ಆಗುವುದಿಲ್ಲ ಎಂದು ಈ ಘನತೆವೆತ್ತ ಸರ್ಕಾರದ ಗೃಹ ಮಂತ್ರಿ ಹೇಳುವ ಮೂಲಕ, ಇಲ್ಲಿಯೂ ಸಹ ತನ್ನ ಓಲೈಕೆ ರಾಜಕಾರಣವನ್ನು ಪ್ರದರ್ಶಿಸುತ್ತಿದ್ದಾರೆ. ಇವರೇ ಈ ಪ್ರಕರಣದ ತನಿಖೆಯ ಮೇಲುಸ್ತುವಾರಿಯನ್ನು ಮುಂದುವರೆಸಿದರೇ, ಎಲ್ಲಾ ಭಯೋತ್ಪಾದಕರಿಗೂ ಕ್ಲೀನ್ ಚಿಟ್ ಸಿಗಲಿದೆ. ಹಾಗಾಗಿ ರಾಜ್ಯದ ನಾಗರೀಕರ ಹಿತದೃಷ್ಟಿಯಿಂದ ಈ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಎನ್.ಐ.ಎ ಗೆ ವಹಿಸಬೇಕೆಂದು ನಾವು ಆಗ್ರಹಿಸುತ್ತೇವೆ ಎಂದು ಬಿಜೆಪಿ ಕಿಡಿಕಾರಿದೆ.