ಮಣಿಪುರದ ಕಾಂಗ್‌ಪೋಕ್ಪಿಯಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ ಕಿರುಕುಳ ನೀಡಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಭಾರಿ ಆಕ್ರೋಶ ವ್ಯಕ್ತವಾಗಿದೆ. ಮಹಿಳೆಯರ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕರು ಪ್ರಶ್ನೆಗಳನ್ನು ಎತ್ತಿದ್ದಾರೆ.
ಈ ಬಗ್ಗೆ ತೀವ್ರ ದುಃಖ ಹೊರಹಾಕಿರುವ ಕಾರ್ಗಿಲ್ ಯೋಧರೊಬ್ಬರು, ದೇಶಕ್ಕಾಗಿ ಹೋರಾಡಿದರೂ ಪತ್ನಿಯನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಬೇಸರ ಹೊರಹಾಕಿದ್ದಾರೆ. ವಿಡಿಯೋದಲ್ಲಿ ಕಂಡುಬಂದ ಮಹಿಳೆಯೊಬ್ಬರ ಪತಿ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಮಾಜಿ ಸೈನಿಕರಾಗಿದ್ದರು. ಅವರು ಅಸ್ಸಾಂ ರೆಜಿಮೆಂಟ್‌ನ ಸುಬೇದಾರ್ ಆಗಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು.
ಆತಂಕಕಾರಿ ಘಟನೆ ಕುರಿತು ಮಾತನಾಡಿದ ಅವರು, ನಾನು ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಹೋರಾಡಿದೆ. ಅಲ್ಲದೆ, ಭಾರತೀಯ ಶಾಂತಿಪಾಲನಾ ಪಡೆಯ ಭಾಗವಾಗಿ ಶ್ರೀಲಂಕಾದಲ್ಲಿಯೂ ಇದ್ದೆ. ನಾನು ದೇಶವನ್ನು ರಕ್ಷಿಸಿದ್ದೇನೆ. ಆದರೆ, ನನ್ನ ನಿವೃತ್ತಿಯ ನಂತರ ನನಗೆ ನನ್ನ ಮನೆ, ನನ್ನ ಹೆಂಡತಿ ಮತ್ತು ಗ್ರಾಮಸ್ಥರಿಗೆ ರಕ್ಷಣೆ ನೀಡಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಹಿಂದಿ ಸುದ್ದಿ ವಾಹಿನಿಯೊಂದರ ಜೊತೆ ಮಾತನಾಡಿದ ಮಾಜಿ ಸೈನಿಕ, ತಾನು ದುಃಖಿತನಾಗಿದ್ದೇನೆ ಮತ್ತು ಖಿನ್ನತೆಗೆ ಒಳಗಾಗಿದ್ದೇನೆ ಎಂದು ಹೇಳಿದ್ದಾರೆ. ಈ ವೇಳೆ ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು. ಹಿಂಸಾಚಾರದ ವೇಳೆ ಪೊಲೀಸರು ಹಾಜರಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಮನೆಗಳಿಗೆ ಬೆಂಕಿಯಿಟ್ಟ ಮತ್ತು ಮಹಿಳೆಯರನ್ನು ಅವಮಾನಿಸಿದ ಎಲ್ಲರಿಗೂ ಕಠಿಣ ಶಿಕ್ಷೆಯಾಗಬೇಕೆಂದು ಎಂದು ಅವರು ಆಗ್ರಹಿಸಿದ್ರು.
ಕಾರ್ಗಿಲ್‌ನ ಮುಂಭಾಗದಲ್ಲಿ ಯುದ್ಧ ನಡೆಯುವುದನ್ನು ನಾನು ನೋಡಿದ್ದೇನೆ. ಇದೀಗ ನಾನು ನೆಲೆಸಿರುವ ನನ್ನ ಸ್ವಂತ ಸ್ಥಳವು ಯುದ್ಧಭೂಮಿಗಿಂತ ಹೆಚ್ಚು ಅಪಾಯಕಾರಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ನಮ್ಮ ಹಳ್ಳಿಗೆ ಬಂದ ದಾಳಿಕೋರರು ಮನೆಗಳಿಗೆ ಬೆಂಕಿ ಹಚ್ಚಿದ್ರು. ಗ್ರಾಮಸ್ಥರೆಲ್ಲರೂ ಪ್ರಾಣ ಉಳಿಸಿಕೊಳ್ಳಲು ಓಡಿಹೋಗಲು ಪ್ರಯತ್ನಿಸಿದ್ರು. ಈ ವೇಳೆ ನನ್ನ ಹೆಂಡತಿ ನನ್ನಿಂದ ಬೇರ್ಪಟ್ಟಳು. ಅವಳು ಮತ್ತು ಇತರ ನಾಲ್ವರು ಗ್ರಾಮಸ್ಥರು ಕಾಡಿನಲ್ಲಿ ಅಡಗಿಕೊಂಡರು ಅಟ್ಟಿಸಿಕೊಂಡು ಗ್ರಾಮಕ್ಕೆ ಪ್ರವೇಶಿಸಿದ ಕೆಲವು ದಾಳಿಕೋರರು ಅಲ್ಲಿ ಅಡಗಿರುವವರನ್ನು ಕಂಡು ದೌರ್ಜನ್ಯವೆಸಗಿದ್ದಾರೆ ಎಂದು ಹೇಳಿದ್ರು.
ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ನಂತರ 160ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದು, ಹಲವರು ಗಾಯಗೊಂಡಿದ್ದಾರೆ.