ಬೆಂಗಳೂರು: ಮೈಸೂರು ಪಾಕ್ ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ? ರಾಜ್ಯದ ಹೆಮ್ಮೆಯ ಸಿಹಿ ತಿಂಡಿ ಮೈಸೂರು ಪಾಕ್ ಗೆ ಈಗ ಜಾಗತಿಕ ಮನ್ನಣೆ ಸಿಕ್ಕಿದೆ.
ನಮ್ಮ ರಾಜ್ಯದ ಹೆಮ್ಮೆಯ ಮೈಸೂರು ಪಾಕ್ ಈಗ ವಿಶ್ವದ ಸ್ಟ್ರೀಟ್ ಫುಡ್ ಸಿಹಿ ತಿನಿಸುಗಳ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದಿದೆ ಎಂಬುದು ಗಮನಾರ್ಹ ಸಂಗತಿ. ಹೌದು. ಟೇಸ್ಟ್ ಆಂಡ್ ಟೇಸ್ಟ್ ಅಟ್ಲಾಸ್ ಹೆಸರಿನ ಸಂಸ್ಥೆಯೊಂದು ನಡೆಸಿದ ವಿಶ್ವದ 50 ಅತ್ಯಂತ ಜನಪ್ರಿಯ ಮತ್ತು ಸ್ವಾದಿಷ್ಟಕರ ಸ್ಟ್ರೀಟ್ ಫುಡ್ ಗಳ ಸಮೀಕ್ಷೆಯಲ್ಲಿ ಮೈಸೂರು ಪಾಕ್ 14ನೇ ಸ್ಥಾನ ಪಡೆದಿದೆ.
ಭಾರತೀಯರೆಲ್ಲರಿಗೆ ಮಾತ್ರವಲ್ಲ ಪ್ರಪಂಚದ ಪ್ರತಿಯೊಬ್ಬರಿಗೂ ಇಷ್ಟವಾಗುವ ಸಿಹಿ ಮೈಸೂರು ಪಾಕ್. 90 ವರ್ಷಗಳ ಹಿಂದೆ ಮೈಸೂರು ಒಡೆಯರ್ ಸಾಮ್ರಾಜ್ಯದಲ್ಲಿ ಮುಖ್ಯ ಬಾಣಸಿಗರಾಗಿದ್ದ ಮಾದಪ್ಪ, ಅಂದಿನ ರಾಜ ಕೃಷ್ಣರಾಜ ಒಡೆಯರ್ ಊಟಕ್ಕೆ ಕುಳಿತಾಗ ತಟ್ಟೆಯಲ್ಲಿ ಸಿಹಿ ತಿಂಡಿ ಇಲ್ಲದ್ದನ್ನು ಗಮನಿಸಿ ಅವಸರದಲ್ಲಿ ಸಕ್ಕರೆ-ತುಪ್ಪ-ಕಡಲೆ ಹಿಟ್ಟು ಮಿಶ್ರಣ ತಯಾರಿಸಿ ಹೊಸ ರೀತಿಯ ಸಿಹಿಯನ್ನು ಬಡಿಸಿದರಂತೆ. ಇದು ಮಹಾರಾಜರಿಗೆ ಭಾರಿ ಇಷ್ಟವಾಗಿ ಈ ಸಿಹಿ ತಿಂಡಿ ಪ್ರಶಂಸೆಗೆ ಕಾರಣವಾಯಿತಂತೆ. ಇದಕ್ಕೊಂದು ಹೆಸರಿಡಲು ಸೂಚಿಸಲಾಗಿ ಮೈಸೂರು ಪಾಕ್ ಎಂಬ ಹೆಸರು ಬಂದಿದೆ.
ದಕ್ಷಿಣ ಭಾರತದ ಜನಪ್ರಿಯ ಸಿಹಿ ತಿಂಡಿ ಮೈಸೂರು ಪಾಕ್ ಈಗ ಜಗತ್ತಿನ ಬೆಸ್ಟ್ ಸ್ಟ್ರೀಟ್ ಫುಡ್ ಪಟ್ಟಿಯಲ್ಲಿ 14ನೇ ಸ್ಥಾನ ಪಡೆದಿದೆ. 4.4 ರೇಟಿಂಗ್ ಸಿಕ್ಕಿದೆ. ಇನ್ನು ಭಾರತದ ಕುಲ್ಫಿಗೆ 18ನೇ ಸ್ಥಾನ ಹಾಗೂ ಕುಲ್ಫಿ ಫಲೂದಾಗೆ 32ನೇ ಸ್ಥಾನ ದೊರೆತಿದೆ.