ಬೆಂಗಳೂರು: ಆಯ್ದ ಶ್ರೇಣಿಯ ಕೆಲವು ಸರಕು ಸಾಗಾಣೆ ವಾಹನ, 10 ಲಕ್ಷ ರೂ. ನಿಂದ 15 ಲಕ್ಷ ರೂ. ಒಳಗಿನ ಕ್ಯಾಬ್ ಗಳಿಗೆ ಜೇವಿತಾವಧಿ ಮೋಟಾರ್ ವಾಹನ ತೆರಿಗೆ ವಿಧಿಸುವ, ಶಾಲಾ -ಕಾಲೇಜು ಬಸ್ ಗಳ ಮೋಟಾರು ವಾಹನ ತೆರಿಗೆ ಹೆಚ್ಚಳ ಸಂಬಂಧ ವಿಧೇಯಕಕ್ಕೆ ಗುರುವಾರ ವಿಧಾನಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಶಾಲಾ ವಾಹನಗಳಿಗೆ 10ನೇ ತರಗತಿವರೆಗೆ ಪ್ರತಿ ಚದರ ಮೀಟರ್ ಗೆ ವಿಧಿಸುತ್ತಿದ್ದ ತೆರಿಗೆಯನ್ನು 20 ರೂ. ನಿಂದ 100 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಶಾಲಾ ಬಸ್ ವಾರ್ಷಿಕ 2,000 ರೂ. ತೆರಿಗೆ ಪಾವತಿಸುತ್ತಿದ್ದಲ್ಲಿ ಇನ್ನು ಮುಂದೆ 10,000 ರೂ. ಪಾವತಿಸಬೇಕಿದೆ.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಕರ್ನಾಟಕ ಮೋಟಾರ್ ವಾಹನಗಳು ತೆರಿಗೆ ನಿರ್ಧರೆಣೆ(ತಿದ್ದುಪಡಿ) ವಿಧೇಯಕ ಮಂಡಿಸಿದ್ದು, ವಿಧಾನಸಭೆ ಒಪ್ಪಿಗೆ ನೀಡಿದೆ.
10ನೇ ತರಗತಿ ಮೇಲ್ಪಟ್ಟ ಕಾಲೇಜು, ವಿಶ್ವವಿದ್ಯಾಲಯ ಇತರೆ ಹಂತದ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಸಂಚಾರಕ್ಕೆ ಬಳಕೆ ಮಾಡುವ ವಾಹನಗಳಿಗೆ ವಿಧಿಸುವ ತೆರಿಗೆಯನ್ನು 80 ರೂ. ನಿಂದ 200 ರೂ. ಗೆ ಹೆಚ್ಚಳ ಮಾಡಲಾಗಿದೆ. 8,000 ರೂ. ತೆರಿಗೆ ಪಾವತಿಸುತ್ತಿದ್ದಲ್ಲಿ ಇನ್ನು ಮುಂದೆ 20,000 ರೂ. ಪಾವತಿಸಬೇಕಾಗುತ್ತದೆ ಎಂದು ಹೇಳಲಾಗಿದೆ.
ತೂಕದ ಆಧಾರದ ಮೇಲೆ ಸರಕು ಸಾಗಣೆ ವಾಹನಗಳನ್ನು ಮೂರು ಹೆಚ್ಚುವರಿ ವರ್ಗೀಕರಣ ಮಾಡಲಾಗಿದ್ದು, ಅವುಗಳಿಗೆ ಜೀವಿತಾವಧಿ ಮೋಟಾರ್ ವಾಹನ ತೆರಿಗೆ ವಿಧಿಸಲು ಸರ್ಕಾರ ನಿರ್ಧರಿಸಿದೆ. 1.5 ಟನ್ ನಿಂದ 5.5 ಟನ್ ವರೆಗಿನ ವಾಹನಗಳಿಗೆ ಜೀವಿತಾವಧಿ ತೆರಿಗೆ ವಿಧಿಸುತ್ತಿದ್ದು, ಇನ್ನು ಮುಂದೆ 5.5 ಟನ್ ನಿಂದ 7.5 ಟನ್, 7.5 ಟನ್ ನಿಂದ 9.5 ಟನ್, 9.5 ಟನ್ ನಿಂದ 12 ಟನ್ ವರೆಗಿನ ತೂಕದ ವಾಹನಗಳಿಗೂ ಜೀವಿತಾವಧಿ ತೆರೆಗೆ ಪಾವತಿಸಬೇಕಿದೆ.
ಸರಕು ಸಾಗಣೆ ವಾಹನದ ಬಳಕೆ ವರ್ಷ ಆಧರಿಸಿ ನಿರ್ದಿಷ್ಟ ಜೀವಿತಾವಧಿ ಶುಲ್ಕ ನಿಗದಿಪಡಿಸಲಾಗುವುದು. ರಾಜ್ಯದಲ್ಲಿ ನೋಂದಣಿಯಾಗುವ ಮೋಟಾರ್ ಕ್ಯಾಬ್ ಗಳಿಗೂ(ಹೊರರಾಜ್ಯ ನೋಂದಣಿ, ನ್ಯಾಷನಲ್ ಪರ್ಮಿಟ್ ಹೊರತುಪಡಿಸಿ) ಜೀವಿತಾವಧಿ ತೆರಿಗೆ ವಿಧಿಸಲು ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ.
ಪ್ರಸ್ತುತ 15 ಲಕ್ಷ ರೂ. ಮೀರಿದ ವಾಹನಗಳಿಗೆ ಶೇಕಡ 15ರಷ್ಟು ಜೀವಿತಾವಧಿ ತೆರಿಗೆ ವಿಧಿಸುತ್ತಿದ್ದು, ಈಗ 10 ಲಕ್ಷ ರೂ.ನಿಂದ 15 ಲಕ್ಷ ರೂ. ಮಿತಿಯೊಳಗಿನ ಕ್ಯಾಬ್ ಗಳಿಗೂ ಶೇಕಡ 9 ರಷ್ಟು ಜೀವಿತಾವಧಿ ತೆರಿಗೆ ವಿಧಿಸಲಾಗುವುದು. ಈಗಾಗಲೇ ಬಳಕೆಯಲ್ಲಿರುವ ವಾಹನಗಳಿಗೂ ಅನ್ವಯವಾಗಲಿದೆ ಎಂದು ಹೇಳಲಾಗಿದೆ.