ಬೆಂಗಳೂರು: ಗಂಗಾ ಕಲ್ಯಾಣ ಯೋಜನೆಯಡಿ ನೀಡುವ ಮೊತ್ತವನ್ನು 3.5 ಲಕ್ಷ ರೂ.ಗೆ ಹೆಚ್ಚಳ ಮಾಡುವಂತೆ ಸಚಿವ ಶಿವರಾಜ ತಂಗಡಗಿ ಸೂಚನೆ ನೀಡಿದ್ದಾರೆ.
ವಿಧಾನಸೌಧದ ನಿನ್ನೆ ತಮ್ಮ ಕೊಠಡಿಯಲ್ಲಿ ವಿವಿಧ ನಿಗಮ ಮಂಡಳಿಗಳ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಚಿವರು ಸಭೆ ನಡೆಸಿದ್ದಾರೆ.
ಗಂಗಾ ಕಲ್ಯಾಣ ಯೋಜನೆಯಡಿ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನೀಡುತ್ತಿರುವ ಘಟಕ ವೆಚ್ಚ ಮತ್ತು ನೆರವಿನ ಮೊತ್ತದಲ್ಲಿ ವ್ಯತ್ಯಾಸವಿದೆ. ಒಂದೊಂದು ಇಲಾಖೆಗೆ ಒಂದೊಂದು ನೀತಿ ಅನುಸರಿಸುವುದು ಸರಿಯಲ್ಲ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನೆರವಿನ ಮೊತ್ತವನ್ನು ಸಮಾಜ ಕಲ್ಯಾಣ ಇಲಾಖೆಯಲ್ಲಿ ಇರುವಂತೆ 3.5 ಲಕ್ಷ ರೂ.ಗೆ ಹೆಚ್ಚಳ ಮಾಡಬೇಕೆಂದು ತಿಳಿಸಿದ್ದಾರೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಗಂಗಾ ಕಲ್ಯಾಣ ಯೋಜನೆಯಡಿ ಪ್ರತಿ ಘಟಕಕ್ಕೆ 2 ಲಕ್ಷ ರೂ. ನೀಡಲಾಗುತ್ತಿದ್ದು, ಸಮಾಜ ಕಲ್ಯಾಣ ಇಲಾಖೆಯಲ್ಲಿ 3.5 ಲಕ್ಷ ರೂ. ನೀಡಲಾಗುತ್ತಿದೆ. ಒಂದೇ ಉದ್ದೇಶದಿಂದ ನೀಡುವ ನೆರವಿನ ಮೊತ್ತದಲ್ಲಿ ಇಲಾಖೆಗೊಂದು ನೀತಿ ಅನುಸರಿಸದೇ ಒಂದೇ ರೀತಿಯ ನೆರವಿನ ಮೊತ್ತ ನೀಡುವಂತೆ ತಿಳಿಸಿದ್ದಾರೆ.