ಬೆಂಗಳೂರು : ‘ಕೆಎಂಎಫ್’ ಜೊತೆ ಇಂದು ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆ ನಡೆಸಲಿದ್ದು, ನಂದಿನಿ ಹಾಲಿನ ದರ 5 ರೂ. ಹೆಚ್ಚಳ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಹಾಲಿನ ದರ ಹೆಚ್ಚಳ ಮಾಡುವ ಸಂಬಂಧ ಜುಲೈ 14 ರಂದು ಕೆಎಂಎಫ್ ಅಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ನಿಗದಿಯಾಗಿತ್ತು. ಆದರೆ ಸಿಎಂ ಸಿದ್ದರಾಮಯ್ಯಗೆ ಅನಾರೋಗ್ಯವಿದ್ದ ಕಾರಣ ಸಭೆ ಮುಂದೂಡಲಾಗಿತ್ತು. ಆ ಸಭೆ ಇಂದು ನಡೆಯಲಿದೆ.
ಗೃಹ ಕಚೇರಿ ಕೃಷ್ಣಾದಲ್ಲಿ ಕೆಎಂಎಫ್ ಅಧ್ಯಕ್ಷ ಭೀಮಾನಾಯಕ್ ನೇತೃತ್ವದಲ್ಲಿ ಹಾಲು ಒಕ್ಕೂಟಗಳ ಪದಾಧಿಕಾರಿಗಳು ಮುಖ್ಯ ಮಂತ್ರಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಸಭೆಯ ನಂತರ ಹಾಲಿನ ದರ ಪ್ರತಿ ಲೀಟರ್ಗೆ ರು. ಹೆಚ್ಚಳದ ಬಗ್ಗೆಯೂ ಅಂತಿಮ ನಿರ್ಧಾರ ಹೊರ ಬೀಳಲಿದೆ. ಹೈನೋದ್ಯಮ ಸಂಕಷ್ಟಕ್ಕೆ ಸಿಲುಕಿದೆ, ಹೀಗಾಗಿ ಹಾಲಿನ ದರ ಪ್ರತಿ ಲೀಟರ್ 5 ರೂ ಹೆಚ್ಚಿಸಬೇಕು ಎಂಬುದು ಒಕ್ಕೂಟಗಳ ಬೇಡಿಕೆಯಾಗಿದೆ. ಹೈನು ರಾಸುಗಳ ನಿರ್ವಹಣಾ ವೆಚ್ಚ, ಪಶು ಆಹಾರಗಳ ಬೆಲೆ ಏರಿಕೆಯಿಂದಾಗಿ ಹಾಲು ಉತ್ಪಾದಕರಿಗೆ ಸಮಸ್ಯೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಾಲಿನ ದರ 5 ರೂ. ಹೆಚ್ಚಿಸಬೇಕು. ಇಲ್ಲದಿದ್ದರೆ ಹಾಲು ಉತ್ಪಾದಕರು ಹಾಗೂ ಹೈನು ಉದ್ಯಮದ ಅಭಿವೃದ್ಧಿಗೆ ತೊಂದರೆ ಆಗಲಿದೆ ಎಂದು ಒಕ್ಕೂಟಗಳು ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ್ದರು. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಹಾಲಿನ ದರ ಹೆಚ್ಚಳಕ್ಕೆ ವಿವಿಧ ಹಾಲು ಒಕ್ಕೂಟಗಳಿಂದ ಕೆಎಂಎಫ್ ಮೇಲೆ ತೀವ್ರ ಒತ್ತಡವಿದ್ದು, ಈ ಹಿನ್ನೆಲೆ ಸರ್ಕಾರ ಹಾಲಿನ ದರ ಹೆಚ್ಚಳಕ್ಕೆ ನಿರ್ಧರಿಸಿದೆ ಎನ್ನಲಾಗಿದೆ. ಈ ಮೂಲಕ ಗ್ರಾಹಕರಿಗೆ ಹಾಲಿನ ದರ ಏರಿಕೆಯ ಬಿಸಿ ತಟ್ಟಲಿದೆ.