ಸ್ವಯಂಘೋಷಿತ ದೇವಮಾನವ ಹಾಗೂ ಡೇರಾ ಸಚ್ಛಾ ಸೌಧ ಮುಖ್ಯಸ್ಥ ರಾಮ್ ರಹೀಂ ಮತ್ತೊಮ್ಮೆ ಪೆರೋಲ್ ಮೂಲಕ ಹೊರ ಬಂದಿದ್ದಾರೆ. ಇಂದಿನಿಂದ ಮುಂದಿನ 30 ದಿನಗಳವರೆಗೆ ರಾಮ್ ರಹೀರಂ ಪೆರೋಲ್ ಮೇರೆಗೆ ಜೈಲಿನಿಂದ ಹೊರಗಿರಲಿದ್ದಾರೆ.
ಸದ್ಯ ರಾಮ್ ರಹೀಂ ರೌಠಕ್ನಲ್ಲಿರುವ ಸುನಾರಿಯಾ ಜೈಲಿನಲ್ಲಿದ್ದಾರೆ. ರಾಮ್ ರಹೀಂ ಪೆರೋಲ್ ಅರ್ಜಿಯನ್ನು ಸ್ವೀಕರಿಸಲಾಗಿದ್ದು ಇಂದು ಸಂಜೆಯ ಒಳಗಾಗಿ ಬಾಂಡ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎನ್ನಲಾಗಿದೆ. ಸಿರ್ಸಾ ಆಶ್ರಮ ಪ್ರವೇಶಕ್ಕೆ ರಾಮ್ ರಹೀಂಗೆ ಅವಕಾಶ ಇಲ್ಲದ ಹಿನ್ನೆಲೆಯಲ್ಲಿ ಭಾಗಪತ್ನಲ್ಲಿರುವ ಬರ್ವಾನಾದಲ್ಲಿರುವ ಆಶ್ರಮಕ್ಕೆ ರಾಮ್ ರಹೀಂ ತೆರಳಲಿದ್ದಾರೆ ಎನ್ನಲಾಗಿದೆ.
ಕಳೆದ 20 ತಿಂಗಳಲ್ಲಿ ಐದನೇ ಬಾರಿಗೆ ಹಾಗೂ ಕಳೆದ 9 ತಿಂಗಳ ಅವಧಿಯಲ್ಲಿ ಮೂರನೇ ಬಾರಿಗೆ ರಾಮ್ ರಹೀಂಗೆ ಪೆರೋಲ್ ಸಿಕ್ಕಂತಾಗಿದೆ. ಇದಕ್ಕೂ ಮುನ್ನ ಹರಿಯಾಣ ಪಂಚಾಯತ್ ಚುನಾವಣೆ, ಆದಂಪುರ ವಿಧಾನಸಭಾ ಉಪ ಚುನಾವಣೆಗೆ ಮುಂಚಿತವಾಗಿ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ 40 ದಿನಗಳ ಪೆರೋಲ್ ನೀಡಲಾಗಿತ್ತು. 2020ರ ಅಕ್ಟೋಬರ್ 24ರಂದು ಮೊಟ್ಟ ಮೊದಲ ಬಾರಿಗೆ ಪೆರೋಲ್ ಮೇಲೆ ರಾಮ್ ರಹೀಂ ಹೊರ ಬಂದಿದ್ದರು. ಕಳೆದ ಎರಡೂವರೆ ವರ್ಷದ ಅವಧಿಯಲ್ಲಿ ರಾಮ್ ರಹೀಂ ಏಳನೇ ಬಾರಿಗೆ ಜೈಲಿನಿಂದ ಪೆರೋಲ್ ಮೂಲಕ ಹೊರ ಬಂದಂತೆ ಆಗಿದೆ.
2020ರ ಅಕ್ಟೋಬರ್ 24ರಂದು ಮೊಟ್ಟ ಮೊದಲ ಬಾರಿಗೆ ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯನ್ನು ಭೇಟಿ ಮಾಡಲು ಸರ್ಕಾರ ಅವರಿಗೆ 1 ದಿನದ ಪೆರೋಲ್ ನೀಡಿತ್ತು.
ಎರಡನೇ ಬಾರಿಗೆ 2021ರ ಮೇ 21 ರಂದು ಮತ್ತೊಮ್ಮೆ ತಾಯಿಯನ್ನು ಭೇಟಿಯಾಗಲು ಒಂದು ದಿನದ ಪೆರೋಲ್ ನೀಡಿತ್ತು.
2022ರ ಫೆಬ್ರವರಿ 7ರಂದು ಹರಿಯಾಣ ಸರ್ಕಾರ, ರಾಮ್ ರಹೀಂಗೆ 21 ದಿನಗಳ ಪೆರೋಲ್ ನೀಡಿತ್ತು.
2022ರ ಜೂನ್ ತಿಂಗಳಲ್ಲಿ ರಾಮ್ ರಹೀಂ ಮತ್ತೊಮ್ಮೆ ಒಂದು ತಿಂಗಳ ಪೆರೋಲ್ ನೀಡಿತ್ತು.
2022ರ ಅಕ್ಟೋಬರ್ ತಿಂಗಳಲ್ಲಿ ರಾಮ್ ರಹೀಂ ಮತ್ತೊಮ್ಮೆ 40 ದಿನಗಳ ಪೆರೋಲ್ ಮೇಲೆ ಜೈಲಿನಿಂದ ಹೊರ ಬಂದಿದ್ದರು.
ಡೇರಾ ಮುಖ್ಯಸ್ಥ ಶಾ ಸತ್ನಾಮ್ ಜನ್ಮ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳುವ ಸಲುವಾಗಿ ರಾಮ್ ರಹೀಂಗೆ 2023ರ ಜನವರಿ 21ರಂದು 40 ದಿನಗಳ ಪೆರೋಲ್ ನೀಡಿತ್ತು.