ಬೆಂಗಳೂರು: ಸದನದಲ್ಲಿ ಪ್ರತಿಭಟನೆ ವೇಳೆ ಅಸ್ವಸ್ಥಗೊಂಡಿದ್ದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಸದ್ಯ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬಸವನಗೌಡ ಪಾಟೀಲ್ ಬಿಪಿ ಕೂಡ ಕಂಟ್ರೋಲ್ ಗೆ ಬಂದಿದ್ದು, ಇಂದು ಡಿಸ್ಚಾರ್ಜ್ ಆಗಿ ವಿಜಯಪುರದ ಮನೆಗೆ ತೆರಳಿದ್ದಾರೆ.. ಎರಡು ಮೂರು ದಿನ ವಿಶ್ರಾಂತಿ ಮಾಡುವಂತೆ ವೈದ್ಯರು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ವಿಧಾನಸಭೆಯಲ್ಲಿ ಬಿಜೆಪಿ ಶಾಸಕರು ಪ್ರತಿಭಟನೆ ನಡೆಸುವಾಗ ಮಾರ್ಷಲ್ ಗಳ ನಡುವೆ ಉಂಟಾದ ನೂಕು ನುಗ್ಗಲಿನಲ್ಲಿ ಯತ್ನಾಳ್ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿ ಕುಸಿದು ಬಿದ್ದರು. ತಕ್ಷಣವೇ ಬಿಜೆಪಿ ಶಾಸಕರು ಹಾಗೂ ಮಾರ್ಷಲ್ ಗಳು ಅವರನ್ನು ವಿಧಾನಸೌಧದಿಂದ ಹೊರಗೆ ಕರೆತಂದು ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕಳುಹಿಸಿದ್ದರು.ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಮಾಜಿ ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಸೇರಿದಂತೆ ಹಲವು ಶಾಸಕರು ಆಸ್ಪತ್ರೆಗೆ ಭೇಟಿ ನೀಡಿ ಯತ್ನಾಳ್ ಆರೋಗ್ಯ ವಿಚಾರಿಸಿದ್ದಾರೆ.