ಮಕ್ಕಳನ್ನು ದೇವರ ಸಮಾನ ಅಂತಾರೆ. ಆದರೆ ಮಕ್ಕಳು ಪದೇ ಪದೇ ಸುಳ್ಳು ಹೇಳ್ತಾ ಇದ್ದಾರೆ ಅಂದರೆ ಒಮ್ಮೆ ಗಂಭೀರವಾಗಿ ಪರಿಗಣಿಸಲೇಬೇಕು.
ಮಕ್ಕಳು ಯಾಕೆ ಸುಳ್ಳು ಹೇಳ್ತಾ ಇದ್ದಾರೆ? ಅವರು ಹೇಳ್ತಾ ಇರೋದು ಖಂಡಿತಾ ಸುಳ್ಳು ಅಂತ ಗೊತ್ತಾದ್ರೆ ಒಮ್ಮೆ ಯೋಚನೆ ಮಾಡಿ, ಪುಟ್ಟ ಮಗುವಿನ ಮನಸ್ಸಿನ ಯಾವುದೋ ಮೂಲೆಯಲ್ಲಿ ಭಯ ಅಥವಾ ಹೇಳಿಕೊಳ್ಳಲು ಆಗದ ಯಾವುದೋ ವಿಷಯ ಅಡಗಿರಬಹುದು.
ಸಾಮಾನ್ಯವಾಗಿ ಮನೆಯಲ್ಲಿ ದೊಡ್ಡವರು ಹೊಡೆಯಬಹುದು, ಟೀಚರ್ ಬಯ್ಯಬಹುದು ಅಂತಲೇ ಮಕ್ಕಳು ನಿಜವನ್ನು ಅಡಗಿಸುವ ಪ್ರಯತ್ನ ಮಾಡ್ತಾರೆ. ಮಕ್ಕಳ ಸಾಮಾನ್ಯ ತಪ್ಪಿಗೆ ಅತಿಯಾಗಿ ವರ್ತಿಸುವ ಹಿರಿಯರ ನಡವಳಿಕೆಯೇ ಮಕ್ಕಳನ್ನು ಸುಳ್ಳು ಹೇಳುವಂತೆ ಪ್ರೇರೇಪಿಸಬಹುದು. ಆ ಕ್ಷಣದ ಸಂಕಟ ಅಥವಾ ಸಮಸ್ಯೆಯಿಂದ ಪಾರದರೆ ಸಾಕು ಎಂಬ ಭಾವನೆಯೇ ಮಕ್ಕಳಿಗೆ ಸುಳ್ಳು ಹೇಳುವ ಅನಿವಾರ್ಯ ಎದುರಾಗಬಹುದು.
ಮಕ್ಕಳು ಸುಳ್ಳು ಹೇಳುವ ಅಭ್ಯಾಸವನ್ನು ರೂಢಿ ಮಾಡಿಕೊಂಡುಬಿಟ್ಟರೆ ದೊಡ್ಡವರಾದ ಮೇಲೆ ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಹಾಗಾಗಿ ಸಣ್ಣ ವಯಸ್ಸಿನಲ್ಲೇ ಮಕ್ಕಳಲ್ಲಿ ನಂಬಿಕೆ, ಆತ್ಮವಿಶ್ವಾಸ ಮೂಡಿಸಿ. ಒಂದು ವೇಳೆ ದೊಡ್ಡ ತಪ್ಪೇ ಮಾಡಿದ್ದರೂ, ಹಿರಿಯರಾದವರು ಸ್ವಲ್ಪ ತಾಳ್ಮೆ ವಹಿಸಿ ಮಕ್ಕಳ ಜೊತೆ ಮಾತನಾಡಿದರೆ ಕಿರಿಯರ ಮನಸ್ಸು ಅರಳಿ ಮುಕ್ತವಾಗಿ ಎಲ್ಲವನ್ನೂ ಹೇಳಿಕೊಳ್ಳಬಹುದು. ಹಾಗಾಗಿ ಮಕ್ಕಳು ಹೇಳುವ ಸುಳ್ಳಿನಲ್ಲಿ ನಿಮ್ಮ ವರ್ತನೆಯನ್ನು ಒಮ್ಮೆ ಪರಿಶೀಲಿಸಿ.