ಹೈದರಾಬಾದ್: ಮಹಿಳೆಯೊಬ್ಬರು ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದು, ನದಿದಡದ ಬಳಿ ಆಕೆ ಬಿಟ್ಟಿದ್ದ ಪಾದರಕ್ಷೆ ಬಳಿಯೇ ಸಾಕುನಾಯಿ ಒಡತಿಗಾಗಿ ಕಾಯುತ್ತಾ ಕುಳಿತಿರುವ ಹೃದಯವಿದ್ರಾವಕ ಘಟನೆ ಆಂದ್ರಪ್ರದೇಶದಲ್ಲಿ ನಡೆದಿದೆ.
ಮಹಿಳೆ ನದಿ ತೀರದಲ್ಲಿ ತನ್ನ ಪಾದರಕ್ಷೆಯನ್ನು ಬಿಟ್ಟು ಗೋದಾವರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಆಕೆಯ ಸಾಕುನಾಯಿ ನದಿ ದಡದಲ್ಲಿದ್ದ ತನ್ನೊಡತಿಯ ಪಾದರಕ್ಷೆ ಬಳಿ ಕುಳಿತು ಒಡತಿ ಈಗ ಬರುತ್ತಾಳೆ, ಆಗ ಬರುತ್ತಾಳೆ ಎಂದು ಪರಿತಪಿಸುತ್ತಾ ರಾತ್ರಿಯಿಡಿ ಕಾಯುತ್ತಲೇ ಇತ್ತು. ಈ ವಿಡಿಯೋ ಸಾಮಾಜಿಕ ಸಾಲತಾಣಗಳಲ್ಲಿ ವೈರಲ್ ಆಗಿದ್ದು, ಮೂಕಪ್ರಾಣಿಯ ವೇದನೆ ಎಂತವರ ಹೃದಯವೂ ಮರುಗುವಂತೆ ಮಾಡದಿರದು.
22 ವರ್ಷದ ಮಹಿಳೆ ಕಾಂಚನಾ ಜಿಎಂಸಿ ಬಾಲಯೋಗಿ ಸೇತುವೆ ಬಳಿಯಿಂದ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಂಜೆ ವಿಹಾರಕ್ಕೆ ಬಂದ ಜನರು ಇದನ್ನು ಗಮನಿಸಿದ್ದು, ವಿಷಯ ಬೆಳಕಿಗೆ ಬಂದಿದೆ. ಸಾಕುನಾಯಿ, ಮಹಿಳೆ ನದಿಗೆ ಹಾರಿದಾಗಿನಿಂದಲೂ ದಡದಲ್ಲಿಯೇ ಕುಳಿತು, ಅಲ್ಲಿಯೇ ಮಲಗಿ ಆಕೆಗಾಗಿ ಕಾಯುತ್ತಲೇ ಇತ್ತು. ಮೃತ ಮಹಿಳೆ ಯಾನಂ ಫೆರಿ ರಸ್ತೆಯ ನಿವಾಸಿ ಮಂದಂಗಿ ಕಾಂಚಾನಾ ಎಂದು ತಿಳಿದುಬಂದಿದೆ. ಆದರೆ ಮಹಿಳೆ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.