ಬೆಂಗಳೂರು : ಐವರು ಶಂಕಿತ ಭಯೋತ್ಪಾದಕರ ಬಂಧನ ಪ್ರಕರಣದ ತನಿಖೆಯನ್ನು NIAಗೆ ಕೊಡಿ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಆರಗ ಜ್ಞಾನೇಂದ್ರ ಬರೀ ಎಫ್ ಐ ಆರ್ ಹಾಕಿ ಬಿಟ್ಟರೆ ಸಾಲದು, ಪ್ರಕರಣವನ್ನು ಎನ್ ಐ ಎ ತನಿಖೆಗೆ ಕೊಡಬೇಕು. ಮಂಗಳೂರು ಸ್ಪೋಟ ಪ್ರಕರಣವನ್ನು ಬಿಜೆಪಿ ಸರ್ಕಾರ ಕೂಲಂಕುಷವಾಗಿ ತನಿಖೆ ನಡೆಸಿತ್ತು. ಹಾಗೆಯೇ ಈ ಪ್ರಕರಣವನ್ನು ಕೂಡ ಎನ್ ಐ ಗೆ ವಹಿಸಬೇಕು. ಜನರಿಗೆ ನಾವು ಸುರಕ್ಷಿತವಾಗಿದ್ದೇವೆ ಎಂಬ ಭಾವನೆ ಬರಬೇಕು ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಬಂಧಿಸಿದ್ದು, ತನಿಖೆ ವೇಳೆ ಸ್ಪೋಟಕ ಮಾಹಿತಿ ಬಯಲಾಗಿದೆ.ಹೋಟೆಲ್, ಬಸ್ ನಿಲ್ದಾಣ, ರೈಲ್ವೇ ನಿಲ್ದಾಣಗಳೇ ಶಂಕಿತ ಉಗ್ರರ ಟಾರ್ಗೆಟ್ ಆಗಿದ್ದು, ಜನಸಂಖ್ಯೆ ಹೆಚ್ಚಿರುವ ಬಸ್ ನಿಲ್ದಾಣ ಹಾಗೂ ಹೋಟೆಲ್ ಗಳಲ್ಲಿ ಬಾಂಬ್ ಸ್ಪೋಟಿಸಲು ಉಗ್ರರು ಸ್ಕೆಚ್ ಹಾಕಿದ್ದರು ಎಂಬ ಸ್ಪೋಟಕ ಮಾಹಿತಿ ಹೊರಬಿದ್ದಿದೆ.