ಕಳೆದ ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದ ರಾಜಕೀಯದಲ್ಲಿ ಎಷ್ಟೆಲ್ಲ ಅಲ್ಲೋಲಕಲ್ಲೋಲ ಸೃಷ್ಟಿಯಾಗಿತ್ತು ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಈ ರಾಜಕೀಯ ಹೈಡ್ರಾಮಾದಲ್ಲಿ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಪಾತ್ರ ಕೂಡ ಮಹತ್ವದ್ದು. ಶರದ್ ಪವಾರ್ ರಾಜಕೀಯ ಹಾದಿ ಹೇಗಿತ್ತು..? ಅತ್ಯಂತ ಕಿರಿಯ ವಯಸ್ಸಿಗೆ ಶರದ್ ಪವಾರ್ ಮಹಾರಾಷ್ಟ್ರ ಸಿಎಂ ಸ್ಥಾನಕ್ಕೆ ಏರಿದ್ದು ಹೇಗೆ..? ಈ ಬಗ್ಗೆ ತಿಳಿದುಕೊಳ್ಳೋಣ :
ಜುಲೈ 18 1978 ರಂದು ಅಂದ್ರೆ 45 ವರ್ಷಗಳ ಹಿಂದೆ ಆಗಿನ ಕಾಂಗ್ರೆಸ್ ನಾಯಕ ಶರದ್ ಗೋವಿಂದರಾವ್ ಪವಾರ್ ಮಹಾರಾಷ್ಟ್ರದ ಅತ್ಯಂತ ಕಿರಿಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಇವತ್ತಿಗೂ ಈ ದಾಖಲೆಯನ್ನು ಯಾರಿಂದಲೂ ಮುರಿಯೋದಕ್ಕೆ ಸಾಧ್ಯವಾಗಿಲ್ಲ ಅನ್ನೋದು ಗಮನಾರ್ಹ.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮತ್ತು ಮಹಾತ್ಮ ಗಾಂಧಿಯವರ ನಿಕಟವರ್ತಿಯಾಗಿದ್ದ ಮರಾಠಾ ನಾಯಕ ಆಗಿನ ರಾಜ್ಯಪಾಲ ಸಾದಿಕ್ ಅಲಿಯಿಂದ ಶರದ್ ಪವಾರ್ ಪ್ರಮಾಣವಚನ ಸ್ವೀಕರಿಸಿದ್ದರು. ಆ ಸಮಯದಲ್ಲಿ ಪವಾರ್ ಅವರಿಗೆ ಮದುವೆಯಾಗಿ 11 ವರ್ಷವಾಗಿತ್ತು ಮತ್ತು ಮಗಳು ಸುಪ್ರಿಯಾಗೆ ಕೇವಲ 9 ವರ್ಷ ವಯಸ್ಸಾಗಿತ್ತು. ಅವರ ಸೋದರ ಸಂಬಂಧಿ ಅಜಿತ್ ಪವಾರ್‌ಗೆ 19 ವರ್ಷ ವಯಸ್ಸಾಗಿತ್ತು.
ಪವಾರ್ 1956 ರಲ್ಲಿ ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ರಾಜಕೀಯ ಜೀವನದ ನಂಟನ್ನು ಹೊಂದಿದ್ದರು. ವಿದ್ಯಾರ್ಥಿ ಜೀವನದಲ್ಲಿ ಮೊದಲ ರಾಜಕೀಯ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದರು. 1958ರಲ್ಲಿ ಭಾರತೀಯ ಯುವ ಕಾಂಗ್ರೆಸ್ ಸದಸ್ಯರಾದ ಶರದ್ ಪವಾರ್ ಎರಡು ಬಾರಿ ಸಿಎಂ ಆಗಿದ್ದ ವೈ.ಬಿ. ಚವಾಣ್ರನ್ನು ತಮ್ಮ ರಾಜಕೀಯ ಗುರುವಾಗಿಸಿಕೊಂಡರು. 1967ರಲ್ಲಿ ಬಾರಾಮತಿ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ರಾಜಕೀಯದಲ್ಲಿ ಎಳಸಾಗಿದ್ದಾಗಲೇ ಶರದ್ ಪವಾರ್ ತಮ್ಮ ಮೊಟ್ಟ ಮೊದಲ ಚುನಾವಣೆಯಲ್ಲಿ ಜಯಭೇರಿ ಬಾರಿಸಿದರು. ಇದಾದ ಬಳಿಕ ಅಲ್ಲಿಂದ 1990ರವರೆಗೆ ಶಾಸಕರಾಗಿ ಬಳಿಕ ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ. ಆರು ದಶಕಗಳಿಂದ ಶರದ್ ಪವಾರ್ ಮಹಾರಾಷ್ಟ್ರ ರಾಜಕೀಯದಲ್ಲಿ ತಮ್ಮ ಪ್ರಭಾವ ಉಳಿಸಿಕೊಂಡಿದ್ದಾರೆ.
ಆರು ದಶಕಗಳಿಂದ ಶರದ್ ಪವಾರ್ ತಮ್ಮ ರಾಜಕೀಯ ಜೀವನವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸುತ್ತಾ ಬಂದಿದ್ದಾರೆ. ಇದೇ ಕಾರಣಕ್ಕೆ ಇವರನ್ನು ಚಾಣಕ್ಯ, ದಿ ಓಲ್ಡ್ ಫಾಕ್ಸ್, ಭೀಷ್ಮ ಪಿತಾಮಹ ಹೀಗೆ ನಾನಾ ಬಿರುದುಗಳಿಂದ ಕರೆಯಲಾಗುತ್ತೆ. ಶರದ್ ಪವಾರ್ ಮೂರು ಬಾರಿ ಮಹಾರಾಷ್ಟ್ರ ಸಿಎಂ ಸ್ಥಾನಕ್ಕೆ ಏರಿದ್ದಾರೆ. ಜೂನ್ 1998ರಿಂದ ಮಾರ್ಚ್ 1990, ಮಾರ್ಚ್ 1999ರಿಂದ ಜೂನ್ 1991ರವರೆಗೆ ಹಾಗೂ 1993ರಿಂದ 1995ರ ಅವಧಿಯಲ್ಲಿ ಶರದ್ ಪವಾರ್ ಸಿಎಂ ಸ್ಥಾನ ಅಲಂಕರಿಸಿದ್ದಾರೆ. ಇನ್ನು ಕೇಂದ್ರ ಸಚಿವರಾಗಿಯೂ ಲೋಕಸಭೆಯಲ್ಲಿಯೂ ಸೇವೆ ಸಲ್ಲಿಸಿದ್ದಾರೆ.