ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು ಅನ್ನೋ ಮಾತಿದೆ. ಕೆಲವರು ಈ ಮಾತನ್ನ ತಮ್ಮ ಜೀವನದಲ್ಲೂ ಅಳವಡಿಸಿಕೊಂಡು ಬಿಟ್ಟಿರುತ್ತಾರೆ.
ಅಂಥವರಲ್ಲಿ ರಾಜಸ್ಥಾನದದ ಪಾರ್ವತಿ ಶರ್ಮಾ ಕೂಡ ಒಬ್ಬರು. ಈಕೆ ಕಳೆದ 8 ವರ್ಷಗಳಿಂದ ಯೋಗೇಂದ್ರ ಅವರನ್ನ ಪ್ರೀತಿಸುತ್ತಿದ್ದಾರೆ. ಈ ಕಾರಣಕ್ಕಾಗಿ ಇವರಿಗೆ ಬಂದ ಎಲ್ಲ ಮದುವೆ ಪ್ರಸ್ತಾಪವನ್ನ ತಿರಸ್ಕರಿಸಿದ್ದಾರೆ. ಅಂತಹ ಮದುವೆ ಪ್ರಸ್ತಾಪಗಳಲ್ಲಿ ಸರ್ಕಾರಿ ಅಧಿಕಾರಿಗಳು ಕೂಡ ಇದ್ದರು.
24 ವರ್ಷದ ಪಾರ್ವತಿ, ಪಿಕ್ಅಪ್-ಡ್ರಾಪ್ ಡ್ರೈವರ್ ಕೆಲಸ ಮಾಡ್ತಿದ್ದ ಯೋಗೇಂದ್ರ, ಕಳೆದ 8 ವರ್ಷಗಳಿಂದಲೂ ಪ್ರೀತಿಸುತ್ತಿದ್ದರು. ಪಾರ್ವತಿ ರಾಜಸ್ಥಾನದ ಚುರು ಜಿಲ್ಲೆಯ ಧುಧ್ವಾಖರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಸಿರ್ಸಾಲಾ ಎಂಬ ಪುಟ್ಟ ಗ್ರಾಮದ ನಿವಾಸಿಯಾಗಿದ್ರೆ, ಯೋಗೇಂದ್ರೆ ಪಕ್ಕದ ತಾರಾಗ್ರಾಮದ ನಿವಾಸಿಯಾಗಿದ್ದಾರೆ. ಪ್ರೀತಿಸಿದ ಹುಡುಗನೇ ಜೀವನ ಸಂಗಾತಿ ಆಗಬೇಕು ಅನ್ನೊ ಉದ್ದೇಶಕ್ಕಾಗಿ ಪಾರ್ವತಿ ಎಷ್ಟೇ ಒಳ್ಳೆಯ ಸಂಬಂಧಗಳು ಬಂದರು ತಿರಸ್ಕರಿಸಿದ್ದಾರೆ. ಅವುಗಳಲ್ಲಿ ಪ್ರೊಫೆಸರ್, ಇಂಜಿನಿಯರ್, ಸೈನಾಧಿಕಾರಿ ಕೂಡ ಇದ್ದರು. ಆದರೂ ಪ್ರಿಯಕರನಿಗಾಗಿ ಜುಲೈ 7ರಂದು ಮನೆಯಿಂದ ಓಡಿ ಹೋಗಿ ತಾರಾನಗರದ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆ.
ಪಾರ್ವತಿ ಮನೆಯವರು ಈ ಮದುವೆಯನ್ನ ಒಪ್ಪಿಕೊಳ್ಳುವುದಕ್ಕೆ ಸುತರಾಂ ಇಷ್ಟವಿಲ್ಲ. ಈಗ ಪಾರ್ವತಿ ಮನೆಯವರು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಮಗಳು ನಾಪತ್ತೆ ಆಗಿರುವುದರ ಕುರಿತು ದೂರನ್ನ ಕೊಟ್ಟಿದ್ದಾರೆ. ಮತ್ತೊಂದೆಡೆ ಪಾರ್ವತಿ ಹಾಗೂ ಯೋಗೇಂದ್ರ, ತಮ್ಮ ಕುಟುಂಬದವರಿಂದ ಪ್ರಾಣಾಪಾಯ ಇದೆ ಎಂದು ಜಿಲ್ಲಾ ಎಸ್ಪಿ ಅವರಲ್ಲಿ ಭದ್ರತೆಗಾಗಿ ಮನವಿ ಮಾಡಿಕೊಂಡಿದ್ದಾರೆ.