ಪಬ್ ಜಿ ಪ್ರೇಮಿಗಾಗಿ ಪಾಕಿಸ್ತಾನದಿಂದ ಅಕ್ರಮವಾಗಿ ಗಡಿದಾಟಿ ಭಾರತಕ್ಕೆ ಬಂದ ಪಾಕಿಸ್ತಾನ ಮೂಲದ ಮಹಿಳೆಯನ್ನ ಮತ್ತೆ ಪಾಕಿಸ್ತಾನಕ್ಕೆ ತೆರಳುವಂತೆ ಹಿಂದೂ ಸಂಘಟನೆಗಳು ಎಚ್ಚರಿಸಿ ಡೆಡ್ ಲೈನ್ ನೀಡಿವೆ.
ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ಳನ್ನ ಗಡಿಪಾರು ಮಾಡದಿದ್ದಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಗೋ ರಕ್ಷಕ್ ಹಿಂದೂ ದಳ ಎಚ್ಚರಿಕೆ ನೀಡಿದೆ. ಮಹಿಳೆ 72 ಗಂಟೆಯೊಳಗೆ ಭಾರತದಿಂದ ವಾಪಸ್ ಹೋಗುವಂತೆ ಡೆಡ್ ಲೈನ್ ನೀಡಿದೆ.
ಸೀಮಾ ಹೈದರ್ ಪಾಕಿಸ್ತಾನದ ಗೂಢಚಾರಿಣಿ ಆಗಿರಬಹುದು, ದೇಶಕ್ಕೆ ಬೆದರಿಕೆಯೊಡ್ಡಬಹುದು ಎಂದು ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ವೇದ್ ನಾಗರ್ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ದೇಶದ್ರೋಹಿ ರಾಷ್ಟ್ರದ ಮಹಿಳೆಯನ್ನು ನಾವು ಸಹಿಸುವುದಿಲ್ಲ. 72 ಗಂಟೆಗಳಲ್ಲಿ ಸೀಮಾ ಹೈದರ್ ದೇಶ ತೊರೆಯದಿದ್ದರೆ ಆಂದೋಲನ ಆರಂಭಿಸುತ್ತೇವೆ ಎಂದು ವೇದ್ ನಾಗರ್ ವಿಡಿಯೋದಲ್ಲಿ ಹೇಳಿದ್ದಾರೆ.
30 ವರ್ಷದ ಸೀಮಾ ಗುಲಾಮ್ ಹೈದರ್ ಮತ್ತು 25 ವರ್ಷದ ಸಚಿನ್ ಮೀನಾ 2019 ರಲ್ಲಿ ಗೇಮಿಂಗ್ ಅಪ್ಲಿಕೇಶನ್ PUBG ಮೂಲಕ ಪ್ರೀತಿಸುತ್ತಿದ್ದರು. ಸಚಿನ್ ಗಾಗಿ ನೇಪಾಳದ ಮೂಲಕ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ ಸೀಮಾ ಗ್ರೇಟರ್ ನೋಯ್ಡಾದ ರಬುಪುರ ಪ್ರದೇಶದಲ್ಲಿ ಬಾಡಿಗೆ ಅಪಾರ್ಟ್ಮೆಂಟ್ನಲ್ಲಿ ಒಟ್ಟಿಗೆ ವಾಸಿಸುತ್ತಿದ್ದಾರೆ. ತನ್ನ ಪತಿಯನ್ನು ತೊರೆದಿರುವ ಸೀಮಾ ತನ್ನ ನಾಲ್ಕು ಮಕ್ಕಳೊಂದಿಗೆ ಸಚಿನ್ ನೊಂದಿಗೆ ಇದ್ದಾರೆ.
ನೇಪಾಳದ ಮೂಲಕ ವೀಸಾ ಇಲ್ಲದೆ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಕ್ಕಾಗಿ ಜುಲೈ 4 ರಂದು ಆಕೆಯನ್ನು ಮತ್ತು ಆಕೆಗೆ ಸಹಾಯ ಮಾಡಿದ್ದಕ್ಕಾಗಿ ಸಚಿನ್ನನ್ನು ಸಹ ಬಂಧಿಸಲಾಯಿತು. ನಂತರ ಇಬ್ಬರಿಗೂ ಜಾಮೀನು ಮಂಜೂರಾಗಿತ್ತು.
ಏತನ್ಮಧ್ಯೆ ಸೀಮಾ ಅವರ ಪತಿ ಗುಲಾಮ್ ಹೈದರ್ ತನ್ನ ಹೆಂಡತಿ ಮತ್ತು ಮಕ್ಕಳನ್ನು ಮನೆಗೆ ಕಳುಹಿಸುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. PUBG ಮೂಲಕ ಭಾರತಕ್ಕೆ ಬರುವಂತೆ ಪತ್ನಿಗೆ ಆಮಿಷವೊಡ್ಡಲಾಗಿದೆ ಎಂದು ವಿಡಿಯೋದಲ್ಲಿ ಆರೋಪಿಸಿದ್ದಾರೆ.