ಬೆಂಗಳೂರು -ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹೆದ್ದಾರಿ ಸುರಕ್ಷತೆ ಕುರಿತು ಪರಿಶೀಲನೆಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮೂವರು ತಜ್ಞರ ಸಮಿತಿಯನ್ನು ರಚಿಸಿದೆ.
ರಸ್ತೆ ಸುರಕ್ಷತೆ ಸಲಹೆಗಾರ ಸುದರ್ಶನ್ ಕೆ. ಪೊಪ್ಲಿ, ಪ್ರಾಧಿಕಾರದ ಉಪ ವ್ಯವಸ್ಥಾಪಕ ಹಾಗೂ ರಸ್ತೆ ಸುರಕ್ಷತಾ ಅಧಿಕಾರಿ ಪ್ರವೀಣ್ ಕುಮಾರ್, ಸೊಹ್ಲಾ -ದೌಸಾ ಎಕ್ಸ್ ಪ್ರೆಸ್ ಯೋಜನೆ ಜಾರಿ ಘಟಕದ ವ್ಯವಸ್ಥಾಪಕ ಜೈವರ್ಧನ್ ಸಿಂಗ್ ಅವರನ್ನು ಒಳಗೊಂಡ ಸಮಿತಿಯನ್ನು ರಚನೆ ಮಾಡಲಾಗಿದೆ.
ಹೆದ್ದಾರಿಗೆ ಭೇಟಿ ನೀಡಿ ಸಮಿತಿ ಸುರಕ್ಷತೆ ಕುರಿತು ಪರಿಶೀಲನೆ ನಡೆಸಿ 10 ದಿನಗಳಲ್ಲಿ ವರದಿ ನೀಡುವಂತೆ ರಸ್ತೆ ಹೆದ್ದಾರಿ ಪ್ರಾಧಿಕಾರದ ಸುರಕ್ಷತೆ ವಿಭಾಗದ ಮುಖ್ಯ ಪ್ರಧಾನ ವ್ಯವಸ್ಥಾಪಕ ಸುನಿಲ್ ಜಿಂದಾಲ್ ಸೂಚಿಸಿದ್ದಾರೆ.
ಬೆಂಗಳೂರು –ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ ವಾಹನಗಳ ಸಂಚಾರಕ್ಕೆ ಮುಕ್ತವಾದ 9 ತಿಂಗಳಲ್ಲಿ 550ಕ್ಕೂ ಅಧಿಕ ಅಪಘಾತ ಸಂಭವಿಸಿದ್ದು, 150ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಹೆದ್ದಾರಿ ಸುರಕ್ಷತೆ ಕುರಿತಾಗಿ ಭಾರಿ ಚರ್ಚೆ ಆರಂಭವಾಗಿದ್ದು, ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡಿರುವುದೇ ಇದಕ್ಕೆ ಕಾರಣವೆಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಪರಿಶೀಲನೆಗಾಗಿ ತಜ್ಞರ ಸಮಿತಿ ರಚನೆ ಮಾಡಲಾಗಿದೆ.