ಸಾಮಾನ್ಯವಾಗಿ ಮಳೆಗಾಲದಲ್ಲಿಯು ಹೆಚ್ಚಿನ ಮಂದಿ ದ್ವಿಚಕ್ರ ವಾಹನವನ್ನು ಬಳಸುತ್ತಾರೆ. ಮಳೆಯಲ್ಲಿ ದ್ವಿಚಕ್ರ ವಾಹನಗಳನ್ನು ಬಳಸುವುದು ಸಂಪೂರ್ಣವಾಗಿ ಸುರಕ್ಷಿತವಾಗಿದ್ದರೂ ಸಹ ದ್ವಿಚಕ್ರವಾಹನಗಳ ಚೈನ್ ಮತ್ತು ಸ್ಪ್ರಾಕೆಟ್‌ಗಳಂತಹ ಪಾರ್ಟ್ಸ್‌ಗಳಿಗೆ ಹೆಚ್ಚುವರಿ ಮೆಂಟೆನೆನ್ಸ್‌ನ ಅಗತ್ಯವಿರುತ್ತದೆ, ಯಾಕಂದ್ರೆ ಇದು ಓಪನ್ ಆಗಿ ಇರುವುದರಿಂದ ಮಳೆಯಿಂದ ಹಾನಿಗೊಳಗಾಗುವ ಸಾಧ್ಯತೆಯಿರುತ್ತದೆ.
ಮಳೆಗಾಲದ ಸಂದರ್ಭದಲ್ಲಿ ಕೆಸರು ಮಣ್ಣು, ಕೊಳಕು ಚೈನ್ ಮೇಲೆ ಅಂಟಿಕೊಳ್ಳಬಹುದು. ಸ್ಪ್ರಾಕೆಟ್‌ಗಳ ಮೇಲೂ ಸಹ ತಿಕ್ಕಾಟಕ್ಕೆ ಕಾರಣವಾಗಬಹುದು. ಇದರಿಂದ ಚೈನ್ ತುಕ್ಕು ಹಿಡಿಯುವ ಸಾಧ್ಯತೆಯಿರುತ್ತೆ, ಅದರಲ್ಲಿನ ರಿಂಗ್‌ಗಳ ನಡುವೆ ಕೆಸರು ಮಣ್ಣು ನಿಲ್ಲುವುದರಿಂದ ಚೈನ್ ಹಾಳಾಗಬಹುದು. ಹಾಗಾದರೆ ನೀವು ಅದನ್ನು ಹೇಗೆ ಸುರಕ್ಷಿತವಾಗಿಡಬಹುದು ಎಂಬುದಕ್ಕೆ ಇಲ್ಲಿ ಕೆಲವು ಸರಳ ಸೂತ್ರಗಳಿವೆ.
ಸಾಮಾನ್ಯವಾಗಿ, ಪ್ರತಿ ನೂರು ಕಿಲೋಮೀಟರ್‌ಗಳಿಗೆ ಚೈನ್ ಸ್ವಚ್ಛಗೊಳಿಸಬೇಕು. ಚೈನ್‌ನ ಮಧ್ಯಭಾಗದಲ್ಲಿ ಅಂಟಿಕೊಂಡಿರುವ ಮರಳು ಮಿಶ್ರಿತ ಮಣ್ಣನ್ನು ಸಹ ಕ್ಲೀನ್ ಮಾಡಬೇಕು. ಮಳೆಗಾಲದಲ್ಲಿ ಚೈನ್ ಶುಚಿಗೊಳಿಸುವ ಜೊತೆಗೆ ಲೂಬಿಂಗ್ ಸಹ ಹೆಚ್ಚಾಗಿ ಮಾಡಬೇಕು.
ಮೊದಲನೆಯ ಹಂತದಲ್ಲಿ ಮೋಟಾರ್‌ಸೈಕಲ್‌ನ್ನು ಮಿಡ್ಲ್ ಸ್ಟ್ಯಾಂಡ್ ಹಾಕಿ ನಿಲ್ಲಿಸಬೇಕು. ಹಿಂದಿನ ಚಕ್ರವನ್ನು ನೆಲದಿಂದ ಮೇಲಕ್ಕೆತ್ತಿ ಶುದ್ಧ ನೀರಿನಿಂದ ತೊಳೆಯಬೇಕು. ಬಳಿಕ ಕೈಯಿಂದ ಚಕ್ರವನ್ನು ತಿರುಗಿಸಿ ಮತ್ತು ಕ್ಲೀನರ್ ಅನ್ನು ಸಿಂಪಡಿಸಬೇಕು. ಬಳಿಕ ಬ್ರಷ್ ಅಥವಾ ಹಳೆಯ ಟೂತ್ ಬ್ರಷ್ ಮೂಲಕ ಚೈನ್‌ನ್ನು ನಿಧಾನವಾಗಿ ಉಜ್ಜಬೇಕು. ಈ ಸಂದರ್ಭ ಯಾವುದೇ ಬಲಪ್ರಯೋಗಿಸದೇ ಹಾನಿಯಾಗದಂತೆ ನೋಡಿಕೊಳ್ಳಬೇಕು.
ಇನ್ನು ಡೀಸೆಲ್ ಅಥವಾ ಸೀಮೆಎಣ್ಣೆಯಿಂದಲೂ ಚೈನ್‌ನ್ನು ಕ್ಲೀನ್ ಮಾಡಬಹುದು. ಇದನ್ನು ಸ್ಪ್ರೇ ಬಾಟಲಿಯಲ್ಲಿ ಹಾಕಿ ಚೈನ್‌ಗೆ ಸ್ಪ್ರೇ ಮಾಡಿ ಕೆಲವು ನಿಮಿಷಗಳ ಕಾಲ ಹಾಗೆ ಬಿಟ್ಟು ಬಿಡಬೇಕು. ಸೀಮೆಎಣ್ಣೆ ಅಥವಾ ಡೀಸೆಲ್‌ನಿಂದ ಚೈನ್ ಹೆಚ್ಚು ಕ್ಲೀನ್ ಆಗುತ್ತೆ. ಚೈನ್ ಕ್ಲೀನರ್‌ಗಳಲ್ಲಿಯೂ ಸಹ ಕೆಲವು ರೀತಿಯ ಡೀಸೆಲ್ ಅಥವಾ ಸೀಮೆಎಣ್ಣೆಯ ಮಿಶ್ರಣ ಇರುತ್ತದೆ.
ಈ ರೀತಿ ಕ್ಲೀನ್ ಮಾಡಿದ ಬಳಿಕ ಒಳ್ಳೆಯ ಟವೆಲ್‌ನಲ್ಲಿ ನೀರಿನ ಒದ್ದೆಯನ್ನು ತೆಗೆದು ಬಳಿಕ ಚೈನ್ ಲ್ಯೂಬ್‌ನ್ನು ತೆಳುವಾದ ಕೋಟ್ ಆಗಿ ಚೈನ್‌ಗೆ ಹಾಕಬೇಕು. ಒಂದು ಕೈಯಿಂದ ಚಕ್ರವನ್ನು ನಿಧಾನವಾಗಿ ತಿರುಗಿಸುವಾಗ ಇದನ್ನು ಮಾಡಬೇಕು. ಮೊದಲ ಲೇಪನವನ್ನು ಮಾಡಿದ ನಂತರ, ಒಂದೆರಡು ನಿಮಿಷ ಕಾದು ಬಳಿಕ ಪರಿಶೀಲಿಸಿ ಮತ್ತು ಅಗತ್ಯವಿದ್ದರೆ ಮತ್ತೊಮ್ಮೆ ಹಾಕಬಹುದು. ಒಂದು ವೇಳೆ ಹೆಚ್ಚುವರಿಯಾದ್ರೆ ಬಟ್ಟೆಯಿಂದ ಒರೆಸಿ ಯಾಕಂದ್ರೆ ಬೈಕ್ ಓಡಿಸುವಾಗ ಅದು ನೀವು ಧರಿಸಿದ ಬಟ್ಟೆ ಮೇಲೆ ಸಿಂಪಡಣೆಯಾಗಬಹುದು.
ಇನ್ನು ಇದನ್ನು ಹೊರತುಪಡಿಸಿ ಗೇರ್‌ಬಾಕ್ಸ್ ಆಯಿಲ್‌ನ್ನು ಚೈನ್‌ನ ಹೆಚ್ಚುವರಿ ಬಾಳಿಕೆಗೆ ಬಳಸುವುದು. ಪೆಟ್ರೋಲ್ ಪಂಪ್ ಅಥವಾ ಆಟೋಮೋಟಿವ್ ಸ್ಟೋರ್‌ಗಳಲ್ಲಿ ಸಾಮಾನ್ಯವಾಗಿ 90 ಗ್ರೇಡ್ ಆಯಿಲ್ ಎಂದು ಕರೆಯಲ್ಪಡುವ ಈ ತೈಲಗಳು ಎಂಜಿನ್ ಆಯಿಲ್‌ಗಳಿಗೆ ಹೋಲಿಸಿದರೆ ಹೆಚ್ಚು ದಪ್ಪವಾಗಿರುತ್ತದೆ ಮತ್ತು ಪರಿಣಾಮಕಾರಿ ರೀತಿಯಲ್ಲಿ ಚೈನ್‌ನ್ನು ಸಾಫ್ಟ್ ಮಾಡುತ್ತೆ. ನೀವು ಚೈನ್ ಲ್ಯೂಬ್ ಮತ್ತು ಗೇರ್‌ಬಾಕ್ಸ್ ಆಯಿಲ್ ಮಿಶ್ರಣವನ್ನು ಸಹ ಬಳಸಬಹುದು.