ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ವೈತ್ರಿ ವಿಚಾರವಾಗಿ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ್ದು, ಮೈತ್ರಿ ಬದಲಾಗಿ ವಿಲೀನ ಮಾಡಿಕೊಳ್ಳಲಿ ಎಂದು ಹೇಳಿದ್ದಾರೆ.
ಜೆಡಿಎಸ್ ಅವಕಾಶವಾದಿ ಪಕ್ಷ, ಅಧಿಕಾರಕ್ಕಾಗಿ ಯಾರ ಜೊತೆಗಾದರೂ ಸೈ. ಜಾತ್ಯಾತೀತ ಎಂಬ ಪದ ಕೇವಲ ಸೋಗಲಾಡಿತನವಷ್ಟೇ ಎಂದು ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಬಿ ಟೀಂ ಜೆಡಿಎಸ್ ಎಂದು ನಾವು ಅನೇಕ ಬಾರಿ ಹೇಳಿದ್ದೆವು. ಈಗ ಹೆಚ್.ಡಿ. ಕುಮಾರಸ್ವಾಮಿ ನಮ್ಮ ಮಾತು ಸತ್ಯ ಎಂಬುದನ್ನು ನಿರೂಪಿಸಲು ಹೊರಟಿದ್ದಾರೆ. ಜೆಡಿಎಸ್ ಪಕ್ಷಕ್ಕೆ ಯಾವುದೇ ತತ್ವಸಿದ್ಧಾಂತಗಳಿಲ್ಲ. ಕೋಮುವಾದಿ ಪಕ್ಷ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಹೊರಟಿರುವ ಜೆಡಿಎಸ್ ಗೆ ಯಾವ ಸಿದ್ಧಾಂತವಿದೆ? ಅದೊಂದು ಅವಕಾಶವಾದಿ ಪಕ್ಷ. ಬಿಜೆಪಿ ಸೇರಿದ್ದಾಗಲೇ ಜಾತ್ಯಾತೀತ ತತ್ವಕ್ಕೆ ಎಳ್ಳುನೀರು. ಆಗಲೇ ಜೆಡಿಎಸ್ ನ ಅವನತಿ ಆರಂಭ ಶುರುವಾಗಿದ್ದು. ಮೈತ್ರಿ ಬದಲು ವಿಲೀನ ಮಾಡಿಕೊಳ್ಳಲಿ. ಆಗ ತಾವೇ ಅಧಿಕೃತವಾಗಿ ವಿಪಕ್ಷ ನಾಯಕನಾಗಬಹುದು ಎಂದು ಹೇಳುವ ಮೂಲಕ ಟಾಂಗ್ ನೀಡಿದ್ದಾರೆ.