ರಾಯಚೂರು: RTPS ವಿದ್ಯುತ್ ಉತ್ಪಾದನಾ ಘಟಕದ 3 ಯೂನಿಟ್ ಗಳು ಸ್ಥಗಿತಗೊಂಡಿವೆ. ಇದರಿಂದಾಗಿ ವಿದ್ಯುತ್ ಉತ್ಪಾದನೆಗೆ ಸಂಕಷ್ಟ ಎದುರಾಗಿದೆ.
ರಾಯಚೂರಿನ ಶಕ್ತಿ ನಗರದಲ್ಲಿರುವ ಆರ್.ಟಿ.ಪಿ.ಎಸ್. ವಿದ್ಯುತ್ ಉತ್ಪಾದನಾ 8 ಘಟಕಗಳಲ್ಲಿ 3 ಘಟಕಗಳು ಸ್ಥಗಿತಗೊಂಡಿವೆ. ಒಟ್ಟು 1700 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿದ್ದ ಆರ್.ಟಿ.ಪಿ.ಎಸ್ ಈಗ 3 ಘಟಕ ಸ್ಥಗಿತ ಹಿನ್ನೆಲೆಯಲ್ಲಿ ಕೇವಲ 400-500 ಮೆಗಾವ್ಯಾಟ್ ವಿದ್ಯುತ್ ಮಾತ್ರ ಉತ್ಪಾದನೆ ಮಾಡುತ್ತಿದೆ.
ಕಳೆದ ವರ್ಷ ಕಲ್ಲಿದ್ದಲು ಪೂರೈಸುವ ಬಂಕರ್ ಕುಸಿತದಿಂದಾಗಿ 1ನೇ ಘಟಕ ಸಂಪೂರ್ಣ ಬಂದ್ ಆಗಿದೆ. ಈಗ ತಾಂತ್ರಿಕ ದೋಷದಿಂದಾಗಿ 2 ಹಾಗೂ 3ನೇ ಘಟಕವೂ ಸ್ಥಗಿತಗೊಂಡಿದೆ. ಇದರಿಂದಾಗಿ 5 ಘಟಕಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಒಂದೆಡೆ ಮಳೆ ಕೊರತೆಯಿಂದ ಜಲಮೂಲಗಳಲ್ಲಿ ನೀರಿನ ಸಂಗ್ರಹ ಕುಂಠಿತವಾಗಿದೆ. ಇದರಿಂದ ಕಲ್ಲಿದ್ದಲು ಮೂಲಕ ವಿದ್ಯುತ್ ಉತ್ಪಾದಿಸುವ ಘಟಕಗಳ ಮೇಲೆ ಒತ್ತಡ ಹೆಚ್ಚಾಗಿದೆ.
ಈ ನಡುವೆ ಆರ್.ಟಿ.ಪಿ.ಎಸ್. ಸಿಬ್ಬಂದಿಗಳು ಸ್ಥಗಿತಗೊಂಡಿರುವ 2 ಘಟಕಗಳ ದುರಸ್ತಿಗಾಗಿ ಹರಸಾಹಸ ಪಡುತ್ತಿದ್ದಾರೆ. ಇನ್ನೊಂದೆಡೆ ಪದೇ ಪದೇ ಲೋಡ್ ಶೆಡ್ಡಿಂಗ್ ನಿಂದಾಗಿ ಸ್ಥಳೀಯರು ಹಾಗೂ ರೈತರು ವಿದ್ಯುತ್ ಘಟಕದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.