ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿ 5 ಯೋಜನೆಗಳಲ್ಲಿ ಮಹತ್ವಾಕಾಂಕ್ಷಿ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಮುಹೂರ್ತ ಫಿಕ್ಸ್ ಆಗಿದ್ದು, ಜುಲೈ 19ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ.
ಮನೆ ಯಜಮಾನಿ ಖಾತೆಗೆ ತಿಂಗಳಿಗೆ 2000 ರೂಪಾಯಿ ನೀಡುವ ಮಹತ್ವದ ಯೋಜನೆಗೆ ಜುಲೈ 19ರಿಂದ ಕರ್ನಾಟಕ ಒನ್, ಗ್ರಾಮ್ ಒನ್, ಬಾಪೂಜಿ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು. ಪ್ರಜಾಪ್ರತಿನಿಧಿ ಮೂಲಕ ನೋಂದಾಯಿಸಿಕೊಂಡಲ್ಲಿ ಮಂಜೂರಾತಿ ಪತ್ರ ಮನೆಗೆ ತಲುಪಲಿದೆ. ಅರ್ಜಿದಾರರು ನೀಡುವ ಮೊಬೈಲ್ ಸಂಖ್ಯೆಗೆ SMS ಮೂಲಕ ಮಂಜೂರಾತಿ ಸಂದೇಶ ರವಾನೆಯಾಗಲಿದೆ.
ಫಲಾನುಭವಿಗಳ ಆಧಾರ್ ಸಂಖ್ಯೆ ಜೋಡಣೆಯಾದ ಖಾತೆಗೆ ಡಿಬಿಟಿ ಮೂಲಕ ಹಣ ವರ್ಗಾವಣೆಯಾಗುತ್ತದೆ. ಫಲಾನುಭವಿಯು ನೋಂದಣಿಗೆ ನಿಗದಿ ಮಾಡಿರುವ ದಿನಾಂಕ, ಸಮಯ ಮತ್ತು ಸ್ಥಳದ ಮಾಹಿತಿಗೆ 1902 ಸಂಖ್ಯೆಗೆ ಕರೆ ಮಾಡಿ ತಿಳಿದುಕೊಳ್ಳಬಹುದು.
ನಿಗದಿಪಡಿಸಿದ ದಿನಾಂಕದಂದು ನೋಂದಣಿಗೆ ಬರಲು ಸಾಧ್ಯವಾಗದಿದ್ದಲ್ಲಿ ಅದೇ ಸೇವಾ ಕೇಂದ್ರಗಳಿಗೆ ಯಾವುದೇ ದಿನಾಂಕದಂದು ಸಂಜೆ 5ರಿಂದ 7 ಗಂಟೆಯೊಳಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದು.
ಇನ್ನು ಗೃಹಲಕ್ಷ್ಮಿ ಯೋಜನೆ ಬಗ್ಗೆ ಯಾವುದೇ ಗೊಂದಲಗಳಿದ್ದರೂ 1902 ಸಂಖ್ಯೆಗೆ ಕರೆ ಮಾಡಿ ಅಥವಾ 8147500500 ಸಂಖ್ಯೆಗೆ SMS ಸಂದೇಶ ಅಥವಾ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.