ಮೈಸೂರು: ಮಂಡ್ಯ, ನಾಗಮಂಗಲ ಬಳಿಕ ಇದೀಗ ಮುಖ್ಯಮಂತ್ರಿಗಳ ತವರು ಜಿಲ್ಲೆ ಮೈಸೂರಿನಲ್ಲಿಯೂ ದ್ವೇಷದ ರಾಜಕಾರಣ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಕೆ.ಆರ್. ನಗರ ಶಾಸಕ ಡಿ. ರವಿಶಂಕರ್ ವಿರುದ್ಧ ಮೊರಾರ್ಜಿ ವಸತಿ ಶಾಲೆಯ ಗುತ್ತಿಗೆ ನೌಕರರು ಗಂಭೀರ ಆರೋಪ ಮಾಡಿದ್ದಾರೆ.
ಅರಕೆರೆ ಗ್ರಾಮದ ಮೊರಾರ್ಜಿ ವಸತಿ ಶಾಲೆಯ ಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆಯುವಂತೆ ಒತ್ತಡ ಹಾಕಲಾಗುತ್ತಿದ್ದು, ಕೆಲಸ ಬಿಡುವಂತೆ ಪ್ರಿನ್ಸಿಪಲ್ ಸ್ವಾಮಿ ನೌಕರರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಕೆಲಸ ಬಿಡಿ, ಇಲ್ಲವೇ ಶಾಸಕರು, ಶಾಸಕರ ಪಿಎ ಭೇಟಿಯಾಗಿ ಎನ್ನುತ್ತಿದ್ದಾರೆ ಎಂದು ವಸತಿ ಶಾಲೆ ನೌಕರ ಆರೋಪಿಸಿದ್ದಾರೆ.
ಈ ಬಗ್ಗೆ ಅಳಲು ತೋಡಿಕೊಂಡಿರುವ ನೌಕರ ಚಲುವರಾಜು, ನಮಗೆ ಹೊರಗುತ್ತಿಗೆ ಆಧಾರದಲ್ಲಿ ಸಾ.ರಾ. ಮಹೇಶ್ ಅವರು ಕೆಲಸ ಕೊಡಿಸಿದ್ದರು. ಕಳೆದ 15 ವರ್ಷಗಳಿಂದ ಮುಖ್ಯ ಅಡುಗೆಯವನಾಗಿ ಕೆಲಸ ಮಾಡುತ್ತಿದ್ದೇನೆ. ಈಗ ಜೆಡಿಎಸ್ ಬೆಂಬಲಿತ ಎಂಬ ಕಾರಣಕ್ಕೆ ಕೆಲಸದಿಂದ ತೆಗೆಯುತ್ತಿದ್ದಾರೆ. ಇಷ್ಟು ದಿನ ಕೆಲಸ ಮಾಡಿದ್ದೀರಿ. ಈಗ ಶಾಸಕರ ಬೆಂಬಲಿಗರಿಗೆ ಕೆಲಸ ಕೊಡಬೇಕು. ಕೆಲಸ ಬಿಡಿ ಎಂದು ಶಾಸಕರ ಪಿಎ ಹೇಳುತ್ತಿದ್ದಾರೆ. ನಮ್ಮನ್ನು ದಿಢೀರ್ ಎಂದು ಹೊರ ಹೋಗಿ ಎಂದರೆ ಎಲ್ಲಿ ಹೋಗಬೇಕು? ಕೆಲಸದಿಂದ ತೆಗೆದು ಹಾಕಿದರೆ ಆತ್ಮಹತ್ಯೆಯೇ ಗತಿ ಎಂದು ಕಣ್ಣೀರಿಟ್ಟಿದ್ದಾರೆ.