ಮಂಡ್ಯ: ರಾಗಿ ಅಥವಾ ಭತ್ತದ ತಳಿಗೆ ರೈತ ಹೋರಾಟಗಾರ ದಿ.ಡಾ.ಜಿ. ಮಾದೇಗೌಡರ ಹೆಸರು ಇಡುವಂತೆ ಬೆಂಗಳೂರು ಕೃಷಿ ವಿವಿ ಕುಲಪತಿ ಮತ್ತು ಕೃಷಿ ಇಲಾಖೆ ಕಾರ್ಯದರ್ಶಿಗೆ ಕೃಷಿ ಸಚಿವ ಚೆಲುವರಾಯಸ್ವಾಮಿ ಸೂಚಿಸಿದ್ದಾರೆ.
ಮಂಡ್ಯದಲ್ಲಿ ಆಯೋಜಿಸಿದ್ದ ಡಾ. ಜಿ. ಮಾದೇಗೌಡ ಪ್ರತಿಷ್ಠಾನದ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಈ ಬಗ್ಗೆ ಪ್ರಸ್ತಾಪಿಸಿದರು. ಮಾದೇಗೌಡರು 60 ವರ್ಷ ಶೈಕ್ಷಣಿಕ, ರಾಜಕೀಯವಾಗಿ ಹಲವು ಕೊಡುಗೆ ನೀಡಿದ್ದಾರೆ. ಅವರ ಹೆಸರನ್ನು ಮುಂದಿನ ಪೀಳಿಗೆಗೆ ಚಿರಸ್ಥಾಯಿಯಾಗಿ ಉಳಿಯಲು ಭತ್ತ ಅಥವಾ ರಾಗಿಯ ತಳಿಗೆ ಮಾದೇಗೌಡರ ಹೆಸರನ್ನು ನಾಮಕರಣ ಮಾಡಬೇಕೆಂದು ಕೃಷಿ ಸಚಿವರಿಗೆ ಮನವಿ ಮಾಡಿದ್ದಾರೆ.
ಅದೇ ಕಾರ್ಯಕ್ರಮದಲ್ಲಿ ಮನವಿಗೆ ಸ್ಪಂದಿಸಿದ ಸಚಿವ ಚೆಲುವರಾಯಸ್ವಾಮಿ, ತುರ್ತಾಗಿ ಈ ಬಗ್ಗೆ ಕ್ರಮ ವಹಿಸುವುದಾಗಿ ತಿಳಿಸಿದರು. ಅಂತೆಯೇ ರಾಗಿ ಅಥವಾ ಭತ್ತದ ತಳಿಗೆ ಜಿ. ಮಾದೇಗೌಡರ ಹೆಸರಿಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.