ಇತ್ತೀಚಿನ ಅಧ್ಯಯನಗಳ ಪ್ರಕಾರ ಪ್ರತಿ ಇಬ್ಬರು ಮಹಿಳೆಯರಲ್ಲಿ ಒಬ್ಬರು ಯುಟಿಐ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಮಹಿಳೆಯರ ಜನನಾಂಗವು ಮೂತ್ರ ವಿಸರ್ಜನೆಯ ದ್ವಾರಕ್ಕೆ ಅತ್ಯಂತ ಸಮೀಪದಲ್ಲಿ ಇರುವುದರಿಂದ ಪುರುಷರಿಗಿಂತ ಮಹಿಳೆಯರು ಹೆಚ್ಚಾಗಿ ಈ ಸೋಂಕನ್ನು ಅನುಭವಿಸುತ್ತಾರೆ. ದೇಶದಲ್ಲಿ ಹೆಚ್ಚುತ್ತಿರುವ ತಾಪಮಾನ ಹಾಗೂ ನೀರಿನ ಕೊರತೆಯಿಂದಾಗಿ ಮಹಿಳೆಯರಲ್ಲಿ ಈ ಸೋಂಕು ಬರುವ ಸಾಧ್ಯತೆ ಇನ್ನಷ್ಟು ಹೆಚ್ಚಾಗಿದೆ. ಹಾಗಾದರೆ ಯುಟಿಐ ಎಂದರೇನು..? ಅನ್ನೋದನ್ನು ತಿಳಿದುಕೊಳ್ಳೋಣ :
“ಯುಟಿಐ ಎಂಬುದು ಮೂತ್ರಪಿಂಡ, ಮೂತ್ರಕೋಶ ಮತ್ತು ಮೂತ್ರನಾಳವನ್ನು ಒಳಗೊಂಡಿರುವ ಮೂತ್ರದ ವ್ಯವಸ್ಥೆಯ ಯಾವುದೇ ಭಾಗದಲ್ಲಿ ಉಂಟಾಗುವ ಸೋಂಕು. ಬ್ಯಾಕ್ಟೀರಿಯಾವು ಮೂತ್ರನಾಳವನ್ನು ಪ್ರವೇಶಿಸುತ್ತದೆ ಮತ್ತು ಮೂತ್ರ ವಿಸರ್ಜನೆಯ ಸಮಯದಲ್ಲಿ ಸುಡುವ ಸಂವೇದನೆ, ಕೆಟ್ಟ ವಾಸನೆಯ ಮೂತ್ರ, ವಾಕರಿಕೆ ಅಥವಾ ವಾಂತಿ, ಸ್ನಾಯು ನೋವು ಅಥವಾ ಹೊಟ್ಟೆಯ ಕೆಳಭಾಗದಲ್ಲಿ ನೋವು ಮುಂತಾದ ರೋಗಲಕ್ಷಣಗಳಿಗೆ ಕಾರಣವಾಗುತ್ತದೆ. ಇದು ಜ್ವರ ಮತ್ತು ಅಪರೂಪದ ಪ್ರಕರಣಗಳಲ್ಲಿ ಮೂತ್ರದಲ್ಲಿ ರಕ್ತವನ್ನು ಉಂಟುಮಾಡಬಹುದು.” ಎಂದು ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯ ಹಿರಿಯ ಪ್ರಸೂತಿ ಮತ್ತು ಸ್ತ್ರೀರೋಗತಜ್ಞ ಡಾ ವೈಶಾಲಿ ಜೋಶಿ ವಿವರಿಸುತ್ತಾರೆ.
ಯುಟಿಐ ಬಗ್ಗೆ ನಾಚಿಕೆ ಪಟ್ಟುಕೊಳ್ಳುವಂತದ್ದು ಏನೂ ಇಲ್ಲ. ಇದು ಬಿಗಿಯಾದ ಒಳ ಉಡುಪು, ಗರ್ಭಾವಸ್ಥೆಯ ಸಂದರ್ಭದಲ್ಲಿ, ದೀರ್ಘಕಾಲದವರೆಗೆ ಮೂತ್ರ ಹಿಡಿದಿಟ್ಟುಕೊಳ್ಳುವುದು ಹಾಗೂ ಕೆಲವರಿಗೆ ಮೊದಲ ಬಾರಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ಬಳಿಕ ಕೂಡ ಮೂತ್ರದ ಸೋಂಕು ಉಂಟಾಗುವ ಸಾಧ್ಯತೆಯಿದೆ. ಹಾಗಾದರೆ ಈ ಸೋಂಕಿನಿಂದ ಪಾರಾಗಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಏನು..? ಇಲ್ಲಿದೆ ಮಾಹಿತಿ :
ಯುಟಿಐ ಮುನ್ನೆಚ್ಚರಿಕೆ ಮತ್ತು ಚಿಕಿತ್ಸೆ
1. ಸಾಕಷ್ಟು ನೀರನ್ನು ಕುಡಿಯಿರಿ.
2. ಮೂತ್ರ ವಿಸರ್ಜನೆಯ ನಂತರ, ಮುಂಭಾಗದಿಂದ ಹಿಂದಕ್ಕೆ ನಿಮ್ಮ ಯೋನಿಯನ್ನು ಒರೆಸಿಕೊಳ್ಳಿ.
3. ಮೂತ್ರನಾಳದ ಮೇಲೆ ಪರಿಣಾಮ ಬೀರುವ ಜನನಾಂಗದ ಪ್ರದೇಶದಲ್ಲಿ ಡಿಯೋಡರೆಂಟ್‌ಗಳು, ಸ್ಪ್ರೇಗಳು, ಸುಗಂಧ ದ್ರವ್ಯಗಳು ಇತ್ಯಾದಿಗಳನ್ನು ಬಳಸಲೇಬಾರದು.
4. ಬ್ಯಾಕ್ಟೀರಿಯಾವನ್ನು ಹೊಡೆದೋಡಿಸಲು ನೀರು ಕುಡಿಯಿರಿ ಮತ್ತು ಸಂಭೋಗದ ನಂತರ ಮೂತ್ರ ವಿಸರ್ಜನೆ ಮಾಡಿ ಜನನಾಂಗವನ್ನು ಸರಿಯಾಗಿ ತೊಳೆಯಿರಿ.
5. ಮೂತ್ರನಾಳದ ಸುತ್ತಲಿನ ಪ್ರದೇಶವನ್ನು ಒಣಗಿಸಲು ಹತ್ತಿ ಒಳ ಉಡುಪು ಮತ್ತು ಸಡಿಲವಾದ ಬಟ್ಟೆಗಳನ್ನು ಧರಿಸಿ.
6. ಕೆಫಿನ್ ಹಾಗೂ ಆಲ್ಕೋಹಾಲ್ಯುಕ್ತ ದ್ರವ್ಯಗಳ ಸೇವೆನೆ ಬೇಡ
ಯುಟಿಐ ಸೋಂಕಿತರಿಗೆ ಮುನ್ನೆಚ್ಚರಿಕೆ :
1. ಮೂತ್ರ ವಿಸರ್ಜಿಸುವಾಗ ನೀವು ಸುಡುವ ಸಂವೇದನೆಯನ್ನು ಹೊಂದಿದ್ದರೆ, ನಿಮ್ಮ ದೈನಂದಿನ ಆಹಾರದಲ್ಲಿ ದ್ರವಯುಕ್ತ ಆಹಾರ ಸೇವನೆ ಹೆಚ್ಚಿಸಬೇಕು.
2. ವೈದ್ಯರು ಆಂಟಿಬಯೋಟಿಕ್ಸ್ ಕೋರ್ಸ್ಗೆ ಸಲಹೆ ನೀಡಿದ್ದರೆ, ಕೋರ್ಸ್ ಅನ್ನು ಸಂಪೂರ್ಣವಾಗಿ ಪೂರ್ಣಗೊಳಿಸಿ.
3. ನಿಮ್ಮ ಖಾಸಗಿ ಭಾಗಗಳ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ.
4. ಎಳನೀರು ಹಾಗೂ ಬಾರ್ಲಿ ನೀರನ್ನು ಸೇವಿಸಿ.
5. ಆಂಟಿಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿರುವ ಆರೋಗ್ಯಕರ ಸಮತೋಲಿತ ಆಹಾರದೊಂದಿಗೆ ನಿಮ್ಮ ರೋಗನಿರೋಧಕ ಶಕ್ತಿಯನ್ನು ಸುಧಾರಿಸಿಕೊಳ್ಳಿ.
ಇವುಗಳನ್ನು ಮಾಡಲೇಬೇಡಿ :
1. ಮೂತ್ರವನ್ನು ಹೆಚ್ಚು ಕಾಲ ಹಿಡಿದಿಟ್ಟುಕೊಳ್ಳುವುದು.
2. ಸ್ವಯಂ-ಔಷಧಿ ಮತ್ತು UTI ಯ ಅಪೂರ್ಣ ಚಿಕಿತ್ಸೆ
3. ಜಿ-ಸ್ಟ್ರಿಂಗ್ ಅಥವಾ ಸಿಂಥೆಟಿಕ್ ಮೆಟೀರಿಯಲ್ ಒಳ ಉಡುಪುಗಳಂತಹ ಬಿಗಿಯಾದ ಒಳ ಉಡುಪುಗಳನ್ನು ಧರಿಸುವುದು