ಲಿಥುವೇನಿಯಾ ನ್ಯಾಟೋ ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯನ್ನು ತಪ್ಪಾಗಿ ವ್ಲಾಡಿಮಿರ್ (ರಷ್ಯಾ ಅಧ್ಯಕ್ಷ) ಎಂದು ಕರೆದಿದ್ದಾರೆ.
ಲಿಥುವೇನಿಯಾದ ವಿಲ್ನಿಯಸ್‌ನಲ್ಲಿ ನಡೆದ ವಾರ್ಷಿಕ ನ್ಯಾಟೋ ಶೃಂಗಸಭೆಯಲ್ಲಿ ಬಿಡೆನ್, ಝೆಲೆನ್ಸ್ಕಿಯನ್ನು ತಪ್ಪಾಗಿ ವ್ಲಾಡಿಮಿರ್ ಎಂದು ಕರೆದಿದ್ದಾರೆ. ತಾವು ಪ್ರಮಾದ ಮಾಡಿದ್ದು ಗೊತ್ತಾಗುತ್ತಿದ್ದಂತೆ, ಸರಿಮಾಡಲು ಪ್ರಯತ್ನಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ನಾನು ಉಕ್ರೇನ್‌ನಲ್ಲಿದ್ದಾಗ ಮತ್ತು ನಾವು ಬೇರೆಡೆಗಳಲ್ಲಿ ಭೇಟಿಯಾದಾಗ ನಾವು ಮಾಡಬಹುದಾದ ಖಾತರಿಗಳ ಬಗ್ಗೆ ಝೆಲೆನ್ಸ್ಕಿಯೊಂದಿಗೆ ಮಾತನಾಡಿದೆವು ಎಂದು ಹೇಳಿದ್ರು.
ಬಿಡೆನ್ ಅವರ ಭಾಷಣದ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ವೊಲೊಡಿಮಿರ್ ಝೆಲೆನ್ಸ್ಕಿಯನ್ನು ತಪ್ಪಾಗಿ ವ್ಲಾಡಿಮಿರ್ ಎಂದು ಕರೆದಿದ್ದು ಭಾರಿ ವೈರಲ್ ಆಗಿದೆ. ವೊಲೊಡಿಮಿರ್ ಮತ್ತು ವ್ಲಾಡಿಮಿರ್ ಎಂಬುದು ಒಂದೇ ಹೆಸರಿನ ವಿಭಿನ್ನ ರೂಪಾಂತರಗಳಾಗಿವೆ. ಜಗತ್ತಿನ ಆಡಳಿತಗಾರ ಅಥವಾ ಶಾಂತಿಯ ಆಡಳಿತಗಾರ ಎಂದರ್ಥವಾಗಿದೆ.
ಅಂದಹಾಗೆ, ಬಿಡೆನ್ ಉಕ್ರೇನ್‌ಗೆ ಸಂಬಂಧಿಸಿದಂತೆ ತಪ್ಪು ಹೇಳಿಕೆ ನೀಡಿದ್ದು ಇದೇ ಮೊದಲಲ್ಲ. 2022 ರ ಸ್ಟೇಟ್ ಆಫ್ ದಿ ಯೂನಿಯನ್ ಭಾಷಣದಲ್ಲಿ, ಬಿಡೆನ್ ಅವರು ಉಕ್ರೇನಿಯನ್ನರನ್ನು, ಇರಾನಿಯನ್ನರು ಎಂದು ತಪ್ಪಾಗಿ ಉಲ್ಲೇಖಿಸಿದ್ದರು. ರಷ್ಯಾದ ಅಧ್ಯಕ್ಷ ಪುಟಿನ್ ಉಕ್ರೇನ್ ಅನ್ನು ಹೇಗೆ ಆಕ್ರಮಿಸಿದ್ದಾರೆ ಎಂಬುದರ ಕುರಿತು ಅವರು ಮಾತನಾಡುತ್ತಿದ್ದರು. ಈ ವೇಳೆ, ಪುಟಿನ್ ಕೈವ್ ಅನ್ನು ಟ್ಯಾಂಕ್‌ಗಳೊಂದಿಗೆ ಸುತ್ತಬಹುದು. ಆದರೆ, ಅವರು ಎಂದಿಗೂ ಇರಾನ್ ಜನರ ಹೃದಯದಲ್ಲಿ ಇರಲು ಸಾಧ್ಯವಿಲ್ಲ ಎಂದು ಬಿಡೆನ್ ಹೇಳಿದ್ದರು.