ಚಿಕ್ಕಮಗಳೂರು: ಇಂದಿಗೂ ರಾಜ್ಯದ ಹಲವು ಜಿಲ್ಲೆಗಳ ಗ್ರಾಮಗಳಲ್ಲಿ ರಸ್ತೆ ಸಂಪರ್ಕ, ವಿದ್ಯುತ್, ಶುದ್ಧ ಕುಡಿಯುವ ನೀರು ಇಲ್ಲದ ದುಃಸ್ಥಿತಿ. ಸ್ವಾತಂತ್ರ್ಯಬಂದು ಇಡೀ ದೇಶ ಅಮೃತ ಮಹೋತ್ಸವ ವರ್ಷಾಚರಣೆಯಲ್ಲಿದ್ದರೂ ಇಂದಿಗೂ ಅದೆಷ್ಟೋ ಹಳ್ಳಿಗಳಿಗೆ ಕನಿಷ್ಠ ಮೂಲಭೂತ ಸೌಲಭ್ಯವೂ ಇಲ್ಲದಿರುವುದು ದುರಂತ. ಅದರಲ್ಲಿಯೂ ರಾಜ್ಯದ ಕರಾವಳಿ, ಚಿಕ್ಕಮಗಳೂರು ಜಿಲ್ಲೆಗಳ ಹಲವು ಗ್ರಾಮಗಳಲ್ಲಿ ಮಳೆಗಾಲ ಬಂತೆಂದರೆ ಜನರ ಸಂಕಷ್ಟ ಹೇಳತೀರದು. ಇಲ್ಲಿನ ಜನರ ಪರದಾಟಕ್ಕೆ ಸ್ಪಷ್ಟ ನಿದರ್ಶನ ಈ ಘಟನೆ.
ಭಾರಿ ಮಳೆ ನಡುವೆ ಅನಾರೋಗ್ಯಕ್ಕೀಡಾಗಿದ್ದ ವೃದ್ಧೆಯೊಬ್ಬರನ್ನು ಗ್ರಾಮಸ್ಥರು ಜೋಳಿಗೆಯಲ್ಲಿ ಹೊತ್ತು ಅರಣ್ಯದ ಕಡಿದಾದ ಮಾರ್ಗದಲ್ಲಿ ಸಾಗಿ ಆಸ್ಪತ್ರೆಗೆ ದಾಖಲಿಸಿರುವ ಘಟನೆ ಚಿಕ್ಕಮಗಳೂರಿನ ಕಳಸ ತಾಲೂಕಿನ ಕಲ್ಕೋಡು ಗ್ರಾಮದಲ್ಲಿ ನಡೆದಿದೆ.
75 ವರ್ಷದ ವೃದ್ಧೆ ಶೇಷಮ್ಮ ಅನಾರೋಗ್ಯಕ್ಕೀಡಾಗಿದ್ದು, ಕುಟುಂಬದವರು ಅವರನ್ನು ಜೋಳಿಗೆಯಲ್ಲಿ ಹೊತ್ತು ಕುಗ್ರಾಮದಿಂದ ಆಸ್ಪತ್ರೆಗೆ ಸಾಗಿಸಿದ್ದಾರೆ.
ಕಲ್ಕೋಡು ಗ್ರಾಮದ ಕಾಡಂಚಿನಲ್ಲಿ ಹತ್ತಾರು ಮನೆಗಳಿವೆ. ಯಾವುದೇ ರಸ್ತೆ ಸಂಪರ್ಕವಿಲ್ಲ, ವಾಹನ ಓಡಾಟವಂತೂ ಕಷ್ಟ ಸಾಧ್ಯ. ಸುತ್ತಮುತ್ತಲೂ ಅರಣ್ಯ, ಪರ್ವತ ಪ್ರದೇಶ. ಅರಣ್ಯ ಇಲಾಖೆ ಅಧಿಕಾರಿಗಳು ಜನರಿಗೆ ರಸ್ತೆ ನಿರ್ಮಿಸಲು ಬಿಡುತ್ತಿಲ್ಲ ಎಂಬ ಆರೋಪವಿದೆ. ಕುಗ್ರಾಮದ ಜನರ ಸಂಕಷ್ಟಕ್ಕೆ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ. ಇದರಿಂದ ಈ ಭಾಗದಲ್ಲಿ ವಾಸವಾಗಿರುವ ಗ್ರಾಮಸ್ಥರು ಮೂಲಭೂತ ಸೌಕರ್ಯವಿಲ್ಲದೇ ಪರಿತಪಿಸುವಂತಾಗಿದೆ.