ಹನುಮಾನ್ ದೇವಸ್ಥಾನದಲ್ಲಿ ಹುಂಡಿ ಒಡೆದು ಅದರಲ್ಲಿದ್ದ 5,000 ರೂ. ಹಣದೊಂದಿಗೆ ಪರಾರಿಯಾಗುವ ಮೊದಲು ಕಳ್ಳನೊಬ್ಬ ಪ್ರಾರ್ಥನೆ ಸಲ್ಲಿಸಿ ದೇವರ ಪಾದದ ಮೇಲೆ 10 ರೂಪಾಯಿ ನೋಟು ಇಟ್ಟಿದ್ದಾನೆ. ಹರಿಯಾಣದ ರೇವಾರಿ ಜಿಲ್ಲೆಯ ಧಾರುಹೆರಾ ಪಟ್ಟಣದ ದೇವಸ್ಥಾನದಲ್ಲಿ ನಡೆದ ಸಂಪೂರ್ಣ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಿಡಿಯೋದಲ್ಲಿ ಕಳ್ಳ ಮೊದಲು ಹನುಮಾನ್ ದೇವಾಲಯದ ಗರ್ಭಗುಡಿಗೆ ಹೋಗುತ್ತಿರುವುದನ್ನು ಕಾಣಬಹುದು. ಭಕ್ತರು ಬಂದು ಪ್ರಾರ್ಥನೆ ಸಲ್ಲಿಸಿದರೆ, ಕಳ್ಳನು ಕುಳಿತು ಸುಮಾರು 10 ನಿಮಿಷಗಳ ಕಾಲ ಹನುಮಾನ್ ಚಾಲೀಸಾವನ್ನು ಪಠಿಸಲು ಪ್ರಾರಂಭಿಸುತ್ತಾನೆ. ಬಳಿಕ ಅರ್ಚಕರ ಸಮ್ಮುಖದಲ್ಲಿ ದೇವರ ಪಾದಗಳಿಗೆ 10 ರೂಪಾಯಿ ಅರ್ಪಿಸುತ್ತಾನೆ.
ಗರ್ಭಗುಡಿಯ ಆಸುಪಾಸಿನಲ್ಲಿ ಯಾರೂ ಇಲ್ಲದ ವೇಳೆ ಸಿಕ್ಕ ಅವಕಾಶವನ್ನು ಪಡೆದುಕೊಂಡ ಕಳ್ಳ ಕಾಣಿಕೆ ಡಬ್ಬಿ ಒಡೆದು 5 ಸಾವಿರ ರೂ. ಗಳೊಂದಿಗೆ ಪರಾರಿಯಾಗಿದ್ದಾನೆ.
ಕಳ್ಳತನ ನಡೆದಿರುವುದು ಅರಿಯದ ಅರ್ಚಕರು ರಾತ್ರಿ ದೇವಸ್ಥಾನದ ಬಾಗಿಲು ಮುಚ್ಚಿ ಮನೆಗೆ ತೆರಳಿದ್ದರು. ಮರುದಿನ ಬೆಳಗ್ಗೆ ಹಿಂತಿರುಗಿ ನೋಡಿದಾಗ ಕಾಣಿಕೆ ಡಬ್ಬಿಯ ಬೀಗ ಮುರಿದಿರುವುದು ಕಂಡು ಬಂದಿದೆ.
ಪೊಲೀಸರು ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಕಳ್ಳತನಕ್ಕೂ ಮೊದಲು ಹನುಮಾನ್ ಚಾಲೀಸಾವನ್ನು ಪಠಿಸುತ್ತಾ ದೇವರ ಪಾದಗಳಿಗೆ ಕಳ್ಳ ನಮಸ್ಕರಿಸಿರುವುದು ಕಂಡುಬಂದಿದೆ. ಪೊಲೀಸರು ಕಳ್ಳನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಆತನ ಪತ್ತೆಗೆ ಶೋಧ ನಡೆಸಿದ್ದಾರೆ.