ಕಲಬುರ್ಗಿ: ಕಲಬುರ್ಗಿಯ ಇಎಸ್ಐಸಿ ಆಸ್ಪತ್ರೆಯಲ್ಲಿ ಏಮ್ಸ್ ಸ್ಥಾಪನೆ ಹಾಗೂ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆಗೆ ಆಗ್ರಹಿಸಿ ಕಲ್ಯಾಣ ನಾಡು ವಿಕಾಸ ವೇದಿಕೆ ಮುಖಂಡರು ಪ್ರಧಾನಿ ಮೋದಿಯವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.
ಸ್ವಾತಂತ್ರ್ಯ ಬಂದು 75 ವರ್ಷ ಕಳೆದು ದೇಶ ಅಮೃತ ಮಹೋತ್ಸವ ಆಚರಿಸುತ್ತಿದ್ದರೂ ಕಲ್ಯಾಣ ಕರ್ನಾಟಕ ಭಾಗಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಲತಾಯಿ ಧೋರಣೆ ಅನುಸರಿಸುತ್ತಿವೆ. ಹೀಗಾಗಿ ಅಭಿವೃದ್ದಿಯಲ್ಲಿ ಈ ಭಾಗ ಹಿಂದುಳಿದಿದೆ. ಇನ್ನು ಕೇಂದ್ರ ಸರ್ಕಾರಕ್ಕಂತು ನಾವು ಮಲತಾಯಿ ಮಕ್ಕಳಾಗಿದ್ದೇವೆ ಎಂದು ವೇದಿಕೆ ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ.
ನಗರದ ಇ ಎಸ್ ಐ ಸಿ ಆಸ್ಪತ್ರೆಯಲ್ಲಿ ಏಮ್ಸ್ ಸ್ಥಾಪನೆ ಮಾಡಬೇಕು. ರೈಲ್ವೆ ವಿಭಾಗೀಯ ಕಚೇರಿಯನ್ನು ಕಲಬುರ್ಗಿಯಲ್ಲಿ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ರಕ್ತದಲ್ಲಿ ಪತ್ರ ಬರೆದಿರುವ ಕಲ್ಯಾಣ ನಾಡು ವೇದಿಕೆ ಮುಖಂಡರು, ಜಿಲ್ಲಾಧಿಕಾರಿ ಮೂಲಕ ಪ್ರಧಾನಿ ಮೋದಿಯವರಿಗೆ ಮನವಿ ಪತ್ರ ರವಾನಿಸಿದ್ದಾರೆ.