ಬೆಂಗಳೂರು: ಯಶಸ್ವಿನಿ ಯೋಜನೆ ಸೇರಲು ಖಾಸಗಿ ಆಸ್ಪತ್ರೆಗಳು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಚಿಕಿತ್ಸೆ ದರ ಹೆಚ್ಚಳಕ್ಕೆ ಪರಿಶೀಲನೆ ನಡೆಸಲಾಗಿದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.
ವಿಧಾನ ಪರಿಷತ್ ನಲ್ಲಿ ಬಿಜೆಪಿಯ ಪ್ರತಾಪಸಿಂಹ ನಾಯಕ್ ಮತ್ತು ಜೆಡಿಎಸ್ ನ ಕೆ.ಎ. ತಿಪ್ಪೇಸ್ವಾಮಿ ಅವರು ಕೇಳಿದ ಪ್ರತ್ಯೇಕ ಪ್ರಶ್ನೆಗಳಿಗೆ ಸಚಿವರು ಉತ್ತರ ನೀಡಿದ್ದಾರೆ.
ಸರ್ಕಾರ ನಿಗದಿ ಮಾಡಿದ ಚಿಕಿತ್ಸೆ ದರ ಕಡಿಮೆ ಇರುವುದರಿಂದ ಖಾಸಗಿ ಆಸ್ಪತ್ರೆಗಳು ಯಶಸ್ವಿನಿ ಯೋಜನೆ ಸೇರ್ಪಡೆಯಾಗಲು ಹಿಂದೇಟು ಹಾಕುತ್ತಿವೆ. ಹೀಗಾಗಿ ಚಿಕಿತ್ಸೆ ದರ ಹೆಚ್ಚಳ ಮಾಡಲು ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.
ಪರಿಷ್ಕೃತ ಯಶಸ್ವಿನಿ ಯೋಜನೆಯಡಿ ಕಳೆದ ಮಾರ್ಚ್ ಅಂತ್ಯದವರೆಗೆ 45.80 ಲಕ್ಷ ಸದಸ್ಯರು ನೋಂದಾಯಿಸಿಕೊಂಡಿದ್ದಾರೆ. ಜನವರಿ 1ರಿಂದ ಜೂನ್ 30ರವರೆಗೆ 22,499 ರೋಗಿಗಳು 476 ನೆಟ್ವರ್ಕ್ ಆಸ್ಪತ್ರೆಗಳಲ್ಲಿ 38.52 ಕೋಟಿ ರೂಪಾಯಿ ಮೊತ್ತದ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ನೋಂದಾಯಿತ ಸದಸ್ಯರಿಗೆ ಐಡಿ ಸಂಖ್ಯೆ ಇರುವ ಪ್ಲಾಸ್ಟಿಕ್ ಕಾರ್ಡ್ ನೀಡಲಾಗುತ್ತಿದೆ. ಕಾರ್ಡ್ ಬಾಕಿ ಇರುವ ಅರ್ಹರಿಗೆ ಈ ತಿಂಗಳಾಂತ್ಯಕ್ಕೆ ಕಾರ್ಡುಗಳನ್ನು ವಿತರಿಸಲಾಗುವುದು. ಯಶಸ್ವಿನಿ ಯೋಜನೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ನಕಲು ಅಲ್ಲ. ಯಶಸ್ವಿನಿ ಯೋಜನೆಯಡಿ ಬಿಪಿಎಲ್, ಎಪಿಎಲ್ ಫಲಾನುಭವಿಗಳು ಯಾವುದೇ ರೆಫರಲ್ ವ್ಯವಸ್ಥೆ ಇಲ್ಲದೆ ಅವರ ಆಯ್ಕೆಯ ಯಾವುದೇ ಯಶಸ್ವಿನಿ ನೆಟ್ವರ್ಕ್ ಆಸ್ಪತ್ರೆಗಳಲ್ಲಿ 5 ಲಕ್ಷ ರೂಪಾಯಿವರೆಗೆ ನಗದುರಹಿತ ಚಿಕಿತ್ಸೆ ಪಡೆಯಬಹುದಾಗಿದೆ ಎಂದರು.