ಬೆಳಗಾವಿ: ಧಾರ್ಮಿಕ ಸಂಸ್ಥೆಗಳಿಗೆ ಸಂತಸದಿಂದ ಹೋಗಿ ದರ್ಶನ ಪಡೆದು ಬರುತ್ತೇವೆ. ಇಂದು ನಾನು ಬಂದಿರುವುದು ವಿಭಿನ್ನ ಸಂದರ್ಭ. ಇದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ನಂದಿ ಪರ್ವತ ಆಶ್ರಮದಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿಯಲ್ಲಿರುವ ಆಶ್ರಮದಲ್ಲಿ ಅವರು ಮಾತನಾಡಿದ ಅವರು, ಜೈನ ಮುನಿಗಳನ್ನು ಕಳೆದುಕೊಂಡಿದ್ದು ನಮಗೆಲ್ಲರಿಗೂ ನೋವು ತಂದಿದೆ. ನಮ್ಮ ಇಲಾಖೆ ಸಿಬ್ಬಂದಿ ತ್ವರಿತವಾಗಿ ಕೆಲಸ ಮಾಡಿ ಆರೋಪಿಗಳನ್ನು ಹಿಡಿದಿದ್ದಾರೆ. ಯಾವ ಉದ್ದೇಶಕ್ಕೆ ಕೊಲೆ ಮಾಡಿದ್ದಾರೆ? ಇದರ ಹಿಂದೆ ಯಾರಿದ್ದಾರೆ ಎಂಬುದು ತನಿಖೆಯಿಂದ ಗೊತ್ತಾಗಲಿದೆ. ತನಿಖೆ ಪೂರ್ಣವಾದ ಬಳಿಕ ಎಲ್ಲಾ ವಿಚಾರ ತಿಳಿಯಲಿದೆ ಎಂದರು.
ನಮಗೆ ಇತಿಮಿತಿ ಇದೆ. ರಾಜಕೀಯ ಕಾರಣಕ್ಕಾಗಿ ಹೇಳಿಕೆ ನೀಡಬಾರದು. ಜೈನ ಮುನಿಗಳ ರಕ್ಷಣೆಗೆ ಏನು ಮಾಡಬೇಕೆಂದು ಸಿದ್ಧತೆ ಮಾಡಿಕೊಂಡಿದ್ದೇವೆ. ಜೈನ ಮುನಿಗಳ ಪಾದಯಾತ್ರೆ ಸಂದರ್ಭದಲ್ಲಿ ರಕ್ಷಣೆ ನೀಡುತ್ತಾ ಬಂದಿದ್ದೇವೆ. ಸರ್ಕಾರಿ ಶಾಲೆಗಳಲ್ಲಿ ವಾಸ್ತವ್ಯಕ್ಕೆ ಸೂಚನೆ ನೀಡುವ ಕೆಲಸ ಮಾಡುತ್ತೇವೆ ಎಂದರು.
ಜೈನ ಸಮುದಾಯದ ಜೊತೆ ನಾವು ಇದ್ದೇವೆ ಎಂದು ಹೇಳಲು ಇಲ್ಲಿಗೆ ಬಂದಿದ್ದೇನೆ. ಇಂತಹ ಘಟನೆ ನಡೆದಾಗ ಸರ್ಕಾರ ಕಣ್ಮುಚ್ಚಿ ಕೂರುವುದಿಲ್ಲ. ನೀವು ಬಯಸಿದಂತೆ ನಮ್ಮ ಸರ್ಕಾರ ನ್ಯಾಯ ಒದಗಿಸುವ ಕೆಲಸ ಮಾಡಲಿದೆ ಎಂದು ನಂದಿ ಪರ್ವತ ಆಶ್ರಮದಲ್ಲಿ ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.