ಕಲಬುರಗಿ : ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ಅನಧಿಕೃತ ಬಡಾವಣೆಗಳು ತಲೆ ಎತ್ತುತ್ತಿದ್ದು, ಇವುಗಳಿಗೆ ಕಡಿವಾಣ ಹಾಕಿ ಸಾರ್ವಜನಿಕರು ಮೋಸ ಹೋಗದಂತೆ ತಡೆಯಿರಿ ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಡಿ.ಸಿ. ಕಚೇರಿ ಸಭಾಂಗಣದಲ್ಲಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅನಧಿಕೃತ ಬಡಾವಣೆ ತಡೆಯಲು ಅಭಿಯಾನ ಆರಂಭಿಸಿ. ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂದರು. ನಗರ ಯೋಜನಾ ಸದಸ್ಯ ಎಸ್.ಎಸ್.ಗಾರಂಪಳ್ಳಿ ಮಾತನಾಡಿ, ಇದೂವರೆಗೆ 16 ಪ್ರಕರಣಗಳಲ್ಲಿ ಅನಧಿಕೃತ ಬಡಾವಣೆ ಮಾಲೀಕರಿಗೆ ನೋಟಿಸ್ ನೀಡಿ ನಿವೇಶನದ ಕಲ್ಲು ತೆಗಿಸಲಾಗಿದೆ ಎಂದರು.
ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ಪ್ರಾಧಿರಾದಿಂದ ಅಭಿವೃದ್ಧಿಪಡಿಸಿದ ಬಡಾವಣೆಗಳಲ್ಲಿ ಕಂಪೌಂಡ್ ಇಲ್ಲದ ಕಾರಣ ಹಂದಿಗಳ ಹಾವಳಿ ಹೆಚ್ಚಿದೆ. ರಸ್ತೆ, ಒಳಚರಂಡಿ ಕಾಮಗಾರಿಗಳು ಕಳಪೆಯಿಂದ ಕೂಡಿದ ಕಾರಣ ಕಿತ್ತು ಹೋಗಿವೆ. ಇದನ್ನು ಸರಿಪಡಿಸಿ ನಿವಾಸಿಗಳಿಗೆ ಉತ್ತಮ ಸೌಲಭ್ಯ ನೀಡಬೇಕು ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ದಯಾನಂದ ಪಾಟೀಲ ಮಾತನಾಡಿ, ಪ್ರಾಧಿಕಾರದ ವ್ಯಾಪ್ತಿ 446 ಚದುರ ಕಿ.ಮೀ ಹೊಂದಿದ್ದು, 43 ಹಳ್ಳಿಗಳ ವಿಸ್ತಾರ ಹೊಂದಿದೆ. ಪ್ರಾಧಿಕಾರವು 22 ಬಡಾವಣೆಗಳನ್ನು ನಿರ್ಮಿಸಿದ್ದು, ಇದರಲ್ಲಿನ 16,619 ವಸತಿ ನಿವೇಶನ ಪೈಕಿ 13,613 ಹರಾಜು ಮಾಡಲಾಗಿದ್ದು, 3,006 ನಿವೇಶನ ಹರಾಜು ಮಾಡಬೇಕಿದೆ ಎಂದು ಸಚಿವರಿಗೆ ಮಾಹಿತಿ ನೀಡಿದರು.
ಮಾಸ್ಟರ್ ಪ್ಲ್ಯಾನ್ ಕುರಿತು ಪ್ರತ್ಯೇಕ ಸಭೆ
ಕಲಬುರಗಿ ಮಹಾನಗರದ ಮಾಸ್ಟರ್ ಪ್ಲ್ಯಾನ್ ವೈಜ್ಞಾನಿಕವಾಗಿ ರೂಪಿಸಿ ಅನುಷ್ಠಾಗೊಳಿಸಬೇಕಿದೆ. ಹೀಗಾದಲ್ಲಿ ಮಾತ್ರ ನಗರಕ್ಕೆ ಬಂಡವಾಳ ಬಂದು ಇಲ್ಲಿನ ಜನರ ಜೀವನ ಮಟ್ಟ ಸುಧಾರಿಸಲಿದೆ. ಇಲ್ಲದೇ ಹೋದಲಿ ಇಲ್ಲಿಂದ ಜನ ಗುಳೆ ಹೋಗ್ತಾರೆ. ಜನವಸತಿ ಪ್ರದೇಶ ಬೆಳೆದಂತೆ ನಗರದ ವಿಸ್ತಾರ ವ್ಯಾಪ್ತಿ ಹೆಚ್ಚಿಸಿ ಮೂಲಸೌಕರ್ಯ ಕಲ್ಪಿಸಬೇಕು. ಕಲಬುರಗಿ ಮಹಾನಗರದ ಮಾಸ್ಟರ್ ಪ್ಲ್ಯಾನ್ ಕುರಿತಂತೆ ಪ್ರತ್ಯೇಕ ಸಭೆ ಕರೆಯಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.ಸಭೆಯಲ್ಲಿ ಕಲಬುರಗಿ ಉತ್ತರ ಶಾಸಕಿ ಕನೀಜ್ ಫಾತಿಮಾ, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವಾರ್ ಸಿಂಗ್ ಮೀನಾ, ಅಪರ ಜಿಲ್ಲಾಧಿಕಾರಿ ಎಂ.ರಾಚಪ್ಪ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.