ಉಡುಪಿ: ಕರಾವಳಿ ಭಾಗದ ಜನರಿಗೆ ಕುಚ್ಚಲಕ್ಕಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟವಾಗಿ ಕುಚ್ಚಲಕ್ಕಿಯನ್ನೇ ನೀಡುತ್ತೇವೆ ಎಂದು ಹೇಳಲಾಗುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಬಡವರಿಗೆ ಅಕ್ಕಿ ಮತ್ತು ಆಹಾರ ಧಾನ್ಯವನ್ನು ನಮ್ಮ ಸರ್ಕಾರ ನೀಡಲಿದೆ. ಈಗ ಕೊಡುತ್ತಿರುವ 5 ಕೆಜಿ ಅಕ್ಕಿ ಜೊತೆಗೆ 5 ಕೆಜಿ ಸೇರಿಸಿ 10 ಕೆಜಿ ಆಹಾರ ಧಾನ್ಯ ನೀಡಲಾಗುವುದು. ಆಹಾರ ಧಾನ್ಯವನ್ನಷ್ಟೇ ನೀಡುತ್ತೇವೆ. ನಿರ್ದಿಷ್ಟವಾಗಿ ಇದನ್ನೇ ಕೊಡುತ್ತೇವೆ ಎಂದು ಹೇಳಲು ಆಗುವುದಿಲ್ಲ ಎಂದು ಉಡುಪಿಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಅಂಗನವಾಡಿಗಳಿಗೆ ಕೊಳೆತ ಮೊಟ್ಟೆ ಸರಬರಾಜು ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಈ ಘಟನೆಯಿಂದ ನಮ್ಮ ಇಲಾಖೆಗೆ ಬಹಳಷ್ಟು ಮುಜುಗರ ಆಗಿದೆ. ಇಲಾಖೆಯ ಮುಖ್ಯ ಉದ್ದೇಶ ಅಂಗನವಾಡಿಗೆ ಬರುವ ಮಕ್ಕಳ ಆರೋಗ್ಯ ಕಾಳಜಿಯಾಗಿದೆ. ಬಡವರ ಮಕ್ಕಳು ಹೆಚ್ಚಾಗಿ ಅಂಗನವಾಡಿಗೆ ಬರುತ್ತಾರೆ. ಶೀಘ್ರವೇ ವ್ಯವಸ್ಥೆ ಬದಲಾವಣೆ ಮಾಡಲಾಗುವುದು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.