ಆರೋಗ್ಯವಾಗಿರಬೇಕೆಂದರೆ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದು ಬಹಳ ಮುಖ್ಯ. ಎಲ್ಲವನ್ನೂ ತಿನ್ನಲು ಸರಿಯಾದ ಸಮಯವಿದೆ. ಸರಿಯಾದ ಸಮಯಕ್ಕೆ ತಿನ್ನದಿದ್ದರೆ ಹಲವಾರು ಗಂಭೀರ ಕಾಯಿಲೆಗಳ ಅಪಾಯವು ಹೆಚ್ಚಾಗುತ್ತದೆ.
ಪ್ರಪಂಚದಲ್ಲಿ ತಿಂಡಿಗಳನ್ನು ಇಷ್ಟಪಡದೇ ಇರುವವರು ಯಾರಿದ್ದಾರೆ ಹೇಳಿ ? ಆದರೆ ಏನನ್ನೇ ತಿಂದರೂ ಸರಿಯಾದ ಸಮಯದಲ್ಲಿ ತಿನ್ನುವುದು ಬಹಳ ಮುಖ್ಯ. ಇತ್ತೀಚಿನ ದಿನಗಳಲ್ಲಿ ಜಂಕ್ ಫುಡ್‌ಗಳ ಸೇವನೆ ಹೆಚ್ಚಾಗಿದೆ. ಕೆಲವರು ಮಧ್ಯರಾತ್ರಿಯಲ್ಲಿ ಸ್ನಾಕ್ಸ್ ತಿನ್ನುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಇನ್ನು ಕೆಲವರು ರಾತ್ರಿ 12 ಗಂಟೆಯ ಬಳಿಕ ಊಟ ಮಾಡುತ್ತಾರೆ. ಈ ತಪ್ಪು ಆಹಾರ ಪದ್ಧತಿಯಿಂದಾಗಿ ರೋಗಗಳು ದೇಹವನ್ನು ಪ್ರವೇಶಿಸುತ್ತವೆ.
ಸ್ನಾಕ್ಸ್ ಅನ್ನು ಸರಿಯಾದ ಸಮಯಕ್ಕೆ ತಿನ್ನದೇ ಇದ್ದರೆ ದೇಹದ ಮೇಲೆ ಹಲವಾರು ದುಷ್ಪರಿಣಾಮಗಳು ಉಂಟಾಗುತ್ತವೆ ಎನ್ನುತ್ತಾರೆ ತಜ್ಞರು. ಏಕೆಂದರೆ ಹೆಚ್ಚಿನ ತಿಂಡಿಗಳನ್ನು ಸಂಸ್ಕರಿಸಲಾಗುತ್ತದೆ. ಅವು ಅತಿಯಾದ ಉಪ್ಪು ಮತ್ತು ಎಣ್ಣೆಯನ್ನು ಹೊಂದಿರುತ್ತವೆ. ಸಂಸ್ಕರಿಸಿದ ಆಹಾರವು ಆರೋಗ್ಯಕ್ಕೆ ಯಾವುದೇ ರೀತಿಯಲ್ಲಿ ಪ್ರಯೋಜನಕಾರಿಯಲ್ಲ. ಸಂಜೆ 6 ಗಂಟೆ ನಂತರ ಮತ್ತು ರಾತ್ರಿ 9 ಗಂಟೆಯ ನಂತರ ಸ್ನಾಕ್ಸ್ ತಿನ್ನುವುದು ಆರೋಗ್ಯಕ್ಕೆ ಹಾನಿಕರ.
ಇತ್ತೀಚಿನ ದಿನಗಳಲ್ಲಿ ಟಿವಿ, ಮೊಬೈಲ್, ಸಿನಿಮಾ ನೋಡುತ್ತಾ ತಿಂಡಿ ತಿನ್ನುವ ಅಭ್ಯಾಸ ಹೆಚ್ಚಾಗಿದೆ. ಸ್ನಾಕ್ಸ್ ರುಚಿಕರ ಎನಿಸಿದರೂ ಅವು ಅನೇಕ ಅಪಾಯಕಾರಿ ರೋಗಗಳಿಗೆ ಕಾರಣವಾಗುತ್ತವೆ. ಏನನ್ನಾದರೂ ತಿನ್ನಬೇಕೆಂಬ ಹಂಬಲವಾದರೆ ಆರೋಗ್ಯಕರವಾಗಿರುವುದನ್ನು ಆಯ್ಕೆ ಮಾಡಿಕೊಳ್ಳಿ. ಹಣ್ಣು, ತರಕಾರಿಗಳು, ಉಪ್ಪುರಹಿತ ಸೀಡ್ಸ್, ಡಾರ್ಕ್ ಚಾಕಲೇಟ್ ತಿನ್ನಬಹುದು. ತಡರಾತ್ರಿ ಆಹಾರವನ್ನು ಸೇವಿಸಬಾರದು ಎಂದು ಅನೇಕ ಸಂಶೋಧನೆಗಳು ಹೇಳುತ್ತವೆ.
ಏಕೆಂದರೆ ಇದು ತೂಕವನ್ನು ಜಾಸ್ತಿ ಮಾಡುತ್ತದೆ. ಇಲಿಗಳ ಮೇಲೆ ನಡೆಸಿದ ಸಂಶೋಧನೆಯಲ್ಲಿ ಆಹಾರ ತಿಂದ ತಕ್ಷಣ ಮಲಗುವುದರಿಂದ ರಕ್ತದಲ್ಲಿ ಕೊಬ್ಬು ಹೆಚ್ಚುತ್ತದೆ ಎಂದು ತಿಳಿದುಬಂದಿದೆ. ರಾತ್ರಿ ಊಟ ಮತ್ತು ಮಲಗುವ ನಡುವೆ ಯಾವಾಗಲೂ 2-3 ಗಂಟೆಗಳ ಅಂತರವಿರಬೇಕು. ಆದರೆ ರಾತ್ರಿ 11 ಗಂಟೆಗೆ ಊಟ ಮಾಡಿ ಮಧ್ಯರಾತ್ರಿ 2 ಅಥವಾ 3 ಗಂಟೆಗೆ ಮಲಗಬೇಡಿ. ರಾತ್ರಿ 7-8 ಗಂಟೆಯೊಳಗೆ ಊಟ ಮಾಡಿ 10 ಗಂಟೆಗೆ ಮಲಗಬೇಕು. ಈ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದರೊಂದಿಗೆ, ವ್ಯಾಯಾಮ ಮತ್ತು ಆರೋಗ್ಯಕರ ಆಹಾರವನ್ನು ಸೇವಿಸಿ.