ಧಾರವಾಡ : ಗ್ರಾಹಕನಿಗೆ ಸೇವಾ ನ್ಯೂನ್ಯತೆ ಎಸಗಿದ ಮಾರುತಿ ಸುಜುಕಿ ಕಂಪನಿಗೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗವು 50 ಸಾವಿರ ರೂ. ಪರಿಹಾರ ಹಾಗೂ 10 ಸಾವಿರ ದಂಡ ವಿಧಿಸಿದೆ.
ಹುಬ್ಬಳ್ಳಿಯ ವಿದ್ಯಾನಗರದ ನಿವಾಸಿ ಶ್ರೀನಿವಾಸ ಪಂಡರಿ ಖಾಸಗಿ ಉದ್ಯೋಗಿಯಾಗಿದ್ದು, ಅವರು ನವ್ಹೆಂಬರ 2019 ರಲ್ಲಿ ರೂ.4,75,000 ಕೊಟ್ಟು ಆರ್.ಎನ್.ಎಸ್. ಮೋಟರ್ಸ್‍ರವರರಿಂದ ಮಾರುತಿ ಅಲ್ಟೋ ಕಾರ್‍ನ್ನು ಖರೀದಿಸಿದ್ದರು. ಖರೀದಿಸಿದ 15 ದಿವಸದೊಳಗಾಗಿ ಆ ಕಾರಿನ ಇಂಜಿನ್ ಮತ್ತು ಬ್ರೇಕ್‍ನಲ್ಲಿ ಅಸಹಜ ಶಬ್ದ ಪ್ರಾರಂಭವಾಯಿತು. ಇದರಿಂದ ದೂರುದಾರನಿಗೆ ವಾಹನ ಓಡಿಸುವಾಗ ಶಬ್ದದಿಂದ ಮಾನಸಿಕ ಹಿಂಸೆಯಾಗುತ್ತಿತ್ತು. ಹಲವಾರು ಬಾರಿ ಎದುರುದಾರರಿಗೆ ವಿಷಯ ತಿಳಿಸಿದಾಗ ಅವರು 3 ರಿಂದ 4 ಸಲ ಚೆಕಪ್ ಮಾಡಿ ಸರಿಪಡಿಸಿರುವುದಾಗಿ ಹೇಳಿ ಅಂತಹ ಶಬ್ದ ವಾಹನ ಓಡಿಸುವಾಗ ಬರುವ ಸಹಜ ಶಬ್ದ ಅಂತಾ ದೂರುದಾರರಿಗೆ ಹೇಳುತ್ತಿದ್ದರು. ಆದರೂ ಆ ವಾಹನ ದಿಂದ ಅಸಹಜ ಶಬ್ದ ಬರುವುದು ಮುಂದುವರಿದಿತ್ತು. ಈ ಬಗ್ಗೆ ದೂರುದಾರ ಮಾರುತಿ ಸುಜುಕಿ ಕಂಪನಿಯ ಬೇರೆ ಡೀಲರ್ ಆದ ಹುಬ್ಬಳ್ಳಿಯ ರೇವನಕರ್ ಮೋಟಾರ್ಸ್‍ರವರ ಹತ್ತಿರ ತಪಾಸಣೆ ಮಾಡಿಸಿದರು.ಇಂಜಿನ್ ಚಾಲೂ ಆದಾಗ ಆ ವಾಹನದಿಂದ ಬರುವ ಶಬ್ದ ಸಹಜ ಶಬ್ದವಲ್ಲ ಆದರೆ ಅದು ಅಸಹಜ ಶಬ್ದ ಅಂತಾ ವರದಿ ಕೊಟ್ಟಿದ್ದರು. ಎದುರುದಾರರು ಆ ರೀತಿ ಬರುವ ಅಸಹಜ ಶಬ್ದ ಸರಿಪಡಿಸಿಲ್ಲವಾದ್ದರಿಂದ ಅದು ವಾಹನದ ಉತ್ಪಾದಕರ ದೋಷವಾಗುತ್ತದೆ ಕಾರಣ ಉತ್ಪಾದಕರು ಮತ್ತು ಡೀಲರ್‍ಗಳಿಂದ ತನಗೆ ಸೇವಾ ನ್ಯೂನ್ಯತೆ ಆಗಿದೆ ಅಂತಾ ಹೇಳಿ ಅವರ ವಿರುದ್ಧ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ಫಿರ್ಯಾದಿ ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ.ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ.ಅ. ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ಅವರು ವಾಹನ ಖರೀದಿಸಿದ 15 ಅಥವಾ 20 ದಿವಸದೊಳಗಾಗಿ ಅದರ ಇಂಜಿನ್ ಮತ್ತು ಬ್ರೇಕ್‍ನಿಂದ ಅಸಹಜ ಶಬ್ದ ಬರುತ್ತಿರುವುದು ಮತ್ತು ಎದುರುದಾರರು ಹಲವು ಬಾರಿ ಅದನ್ನು ತಪಾಸಣೆ ಮಾಡಿ ಸರಿಪಡಿಸದೇ ಇದ್ದುದರಿಂದ ಆ ವಾಹನದಲ್ಲಿ ಉತ್ಪಾದನೆಯ ದೋಷ ಇದೆ ಅಂತಾ ಅಭಿಪ್ರಾಯ ಪಟ್ಟು ತೀರ್ಪು ನೀಡಿದೆ. ದೂರು ದಾಖಲಾದ ನಂತರ ಆಯೋಗದ ಸೂಚನೆಯ ಮೇರೆಗೆ ದೂರುದಾರ ಎದುರುದಾರ ಕಂಪನಿಯಲ್ಲಿ ತನ್ನ ವಾಹನ ಬಿಟ್ಟು ಅಸಹಜ ಶಬ್ದ ಬರುವುದನ್ನು ನಿವಾರಣೆ ಮಾಡುವಂತೆ ಕೋರಿದರು ಎದುರುದಾರರು ಅಂತಹ ಯಾವುದೇ ಕ್ರಮ ಕೈಗೊಳ್ಳಲು ವಿಫಲರಾಗಿರುವುದು ಗ್ರಾಹಕನಿಗೆ ಅವರು ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ತೀರ್ಪಿನಲ್ಲಿ ಅಭಿಪ್ರಾಯ ಪಡಲಾಗಿದೆ. ಒಳ್ಳೆಯ ವಾಹನ ಉತ್ಪಾದಿಸಿ ಗ್ರಾಹಕನಿಗೆ ಕೊಡಬೇಕಾದುದು ಉತ್ಪಾದಕರ ಕರ್ತವ್ಯ ಆದರೆ ಈ ಪ್ರಕರಣದಲ್ಲಿ ಅವರು ದೂರುದಾರರಿಗೆ ದೋಷಯುಕ್ತ ವಾಹನ ಮಾರಾಟ ಮಾಡಿರುವುದು ತಪ್ಪು ಅಂತಾ ಅಭಿಪ್ರಾಯಪಟ್ಟು ಉತ್ಪಾದಕರಾದ ಮಾರುತಿ ಸುಜುಕಿ ಕಂಪನಿಯವರು ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ತೊಂದರೆಗಾಗಿ ರೂ.50,000 ಪರಿಹಾರ ನೀಡುವಂತೆ ಮತ್ತು ರೂ.10,000 ಪ್ರಕರಣದ ಖರ್ಚುವೆಚ್ಚವನ್ನು ಒಂದು ತಿಂಗಳ ಒಳಗಾಗಿ ನೀಡುವಂತೆ ಆಯೋಗ ಆದೇಶಿಸಿದೆ. ಜೊತೆಗೆ ವಾಹನದ ಇಂಜಿನ್ ಮತ್ತು ಬ್ರೆಕ್ ನಲ್ಲಿ ಬರುವ ಅಸಹಜ ಶಬ್ದವನ್ನು ಹೋಗಲಾಡಿಸಿ ಸೂಕ್ತ ಸೇವೆ ಒದಗಿಸುವಂತೆ ಇಬ್ಬರೂ ಎದುರುದಾರರಿಗೆ ಆಯೋಗ ತಿಳಿಸಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಸಹಾಯಕ ರಿಜಿಸ್ಟ್ರಾರ್ ಮತ್ತು ಸಹಾಯಕ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.