ಬೆಂಗಳೂರು: ಅನ್ನಭಾಗ್ಯ ಯೋಜನೆ 5 ಕೆಜಿ ಅಕ್ಕಿ ಹಣ ಜುಲೈ 9, 10 ರಿಂದ ಖಾತೆಗೆ ಜಮಾ ಮಾಡಲಾಗುವುದು. ಕಾಂಗ್ರೆಸ್ ಸರ್ಕಾರ 10 ಕೆಜಿ ಅಕ್ಕಿ ಕೊಡುವ ಭರವಸೆ ನೀಡಿದ್ದು, 5 ಕೆಜಿ ಅಕ್ಕಿ ವಿತರಿಸಿ ಉಳಿದ 5 ಕೆಜಿ ಅಕ್ಕಿ ಬದಲಿಗೆ ಹಣ ನೀಡಲಾಗುವುದು.
ಅಕ್ಕಿ ಸಿಗುವುದು ವಿಳಂಬವಾದ ಹಿನ್ನೆಲೆಯಲ್ಲಿ ಖಾತೆಗೆ ಅಕ್ಕಿಯ ಹಣ ಜಮಾ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಜುಲೈ 10ರೊಳಗೆ ಇಲ್ಲವೇ ಜುಲೈ 9 ರಿಂದಲೇ ಫಲಾನುಭವಿಗಳ ಖಾತೆಗೆ ಅಕ್ಕಿ ಹಣ ಜಮಾ ಮಾಡಲು ಚಿಂತನೆ ನಡೆದಿದೆ.
ಸರ್ಕಾರದಿಂದ ಈ ಕುರಿತು ಸೂಚನೆ ನೀಡಲಾಗಿದ್ದು, ಆಹಾರ ಇಲಾಖೆ ಅಧಿಕಾರಿಗಳು ಖಾತೆಗೆ ಹಣ ಹಾಕಲು ತಯಾರಿ ಮಾಡಿಕೊಂಡಿದ್ದಾರೆ. ಪ್ರತಿದಿನ ಎರಡು ಜಿಲ್ಲೆಗಳನ್ನು ಆಯ್ಕೆ ಮಾಡಿ ಹಣ ಹಾಕುವ ಕುರಿತು ಚಿಂತನೆ ನಡೆದಿದೆ. ಆರಂಭಿಕವಾಗಿ ಮೈಸೂರು, ಕೋಲಾರ ಜಿಲ್ಲೆಗಳ ಪಡಿತರ ಚೀಟಿದಾರರಿಗೆ ಹಣ ಹಾಕಿ ನಂತರ ಹಂತಹಂತವಾಗಿ ಪ್ರತಿದಿನ ಎರಡು ಜಿಲ್ಲೆಗಳ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.