ತುಮಕೂರು : ಸಾವಿನ ದವಡೆಯಲ್ಲಿದ್ದ ಮಕ್ಕಳನ್ನು ರಕ್ಷಿಸಿ ಮಹಿಳೆಯೊಬ್ಬರು ಪ್ರಾಣ ಬಿಟ್ಟ ಮನಕಲುಕುವ ಘಟನೆ ತುಮಕೂರಿನ ಶಿರಾ ತಾಲ್ಲೂಕಿನ ರಥಸಂದ್ರ ಗ್ರಾಮದ ಕೆರೆಯಲ್ಲಿ ನಡೆದಿದೆ.
ಇಂದು ಭಾನುವಾರವಾದ್ದರಿಂದ ಮಕ್ಕಳಿಗೆ ಶಾಲೆಗೆ ರಜೆ ಇತ್ತು, ಆದ್ದರಿಂದ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಕೆರೆಗೆ ಬಟ್ಟೆ ತೊಳೆಯಲು ಹೋಗಿದ್ದರು., ಇಬ್ಬರು ಮಕ್ಕಳು ಕೆರೆದಂಡೆಯಲ್ಲಿ ಆಟವಾಡುತ್ತಿದ್ದರು, ಹೇಗೋ ಮಕ್ಕಳು ಆಟವಾಡುತ್ತಾ ಇದ್ದಾರೆ ಎಂದು ಅಷ್ಟು ಗಮನ ಹರಿಸದೇ ತಾಯಿ ತನ್ನಪಾಡಿಗೆ ಬಟ್ಟೆ ತೊಳೆಯುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಮಕ್ಕಳು ಕಾಣೆಯಾಗಿದ್ದು, ಹುಡುಕಾಡಿದಾಗ ನೀರಿನಲ್ಲಿ ಬಿದ್ದಿರುವ ವಿಷಯ ಗೊತ್ತಾಗಿದೆ. ಇದನ್ನು ಕಂಡು ಗಾಬರಿಯಾದ ತಾಯಿ ಕೂಡಲೇ ನೀರಿಗೆ ಧುಮುಕಿ ಮಕ್ಕಳನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ.
ಕೆರೆದ ಧುಮುಕಿದ ತಾಯಿ ಮುಳುಗುತ್ತಿದ್ದ ಮಕ್ಕಳನ್ನು ಹೊರಗೆ ಎಸೆದಿದ್ದು, ಜೊತೆಗಿದ್ದ ಮಹಿಳೆಯರು ಮಕ್ಕಳನ್ನು ಎಳೆದುಕೊಂಡಿದ್ದಾರೆ. ಆದರೆ ಮಕ್ಕಳನ್ನು ಉಳಿಸಿದ ಮಹಿಳೆ ಈಜುಬಾರದೇ, ಹೊರಕ್ಕೂ ಬಾರದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾಳೆ. ಬಟ್ಟೆ ತೊಳೆಯಲು ಜೊತೆಗೆ ಬಂದ ಮಹಿಳೆಯರಿಗೆ ಈಜು ಬಾರದ ಹಿನ್ನೆಲೆ ರಕ್ಷಣೆಗಾಗಿ ಕೂಗಿಕೊಂಡಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಮಹಿಳೆ ಮೃತಪಟ್ಟಿದ್ದಳು. ಸಾವಿನ ದವಡೆಯಲ್ಲಿದ್ದ ಮಕ್ಕಳನ್ನು ಕಾಪಾಡಿದ ಮಹಾತಾಯಿ ಕೊನೆಯುಸಿರೆಳೆದಿದ್ದಾಳೆ.