ಪ್ರಸ್ತುತ ದಿನಮಾನಗಳಲ್ಲಿ ಸಾಮಾಜಿಕ ಜಾಲತಾಣಗಳು ಪ್ರಬಲ ಮಾಧ್ಯಮವಾಗಿ ಪರಿಗಣಿಸಲ್ಪಟ್ಟಿದ್ದು, ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವವರಿಗೆ ಹಣದ ಹೊಳೆಯೇ ಹರಿದು ಬರುತ್ತದೆ. ಅಲ್ಲದೆ ಜನಾಭಿಪ್ರಾಯವನ್ನು ರೂಪಿಸುವಷ್ಟರ ಮಟ್ಟಿಗೆ ಸೋಶಿಯಲ್ ಮೀಡಿಯಾಗಳು ಪ್ರಭಾವಿಯಾಗಿವೆ.
ಈ ಕಾರಣಕ್ಕಾಗಿ ಚುನಾವಣೆ ಸಂದರ್ಭಗಳಲ್ಲಿ ರಾಜಕೀಯ ಪಕ್ಷಗಳು ಸೋಶಿಯಲ್ ಮೀಡಿಯಾಗಳ ಮೊರೆ ಹೋಗುತ್ತವೆ. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ರಾಜಸ್ಥಾನ ಸರ್ಕಾರ ಸಾಮಾಜಿಕ ಜಾಲತಾಣಗಳ ಪ್ರಭಾವಿಗಳಿಗೆ (ಸೋಶಿಯಲ್ ಮೀಡಿಯಾ ಇನ್ಫ್ಲುಯನ್ಸರ್) ಬಂಪರ್ ಆಫರ್ ಒಂದನ್ನು ನೀಡಿದೆ.
ಈ ವರ್ಷಾಂತಕ್ಕೆ ರಾಜಸ್ಥಾನ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಹೀಗಾಗಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಈಗಿನಿಂದಲೇ ಸಿದ್ಧತೆ ಆರಂಭಿಸಿದೆ. ಇದೀಗ ಮತ್ತೊಂದು ಘೋಷಣೆ ಮಾಡಲಾಗಿದ್ದು, ಸರ್ಕಾರದ ಯೋಜನೆಗಳನ್ನು ವರದಿ ಮಾಡುವ ಸಾಮಾಜಿಕ ಜಾಲತಾಣಗಳ ಪ್ರಭಾವಿಗಳಿಗೆ ಮಾಸಿಕ 5 ಲಕ್ಷ ರೂಪಾಯಿವರೆಗೆ ಹಣ ನೀಡಲಾಗುವುದು ಎಂದು ತಿಳಿಸಿದೆ.