ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ನಡೆದ ರೈಲು ದುರಂತಕ್ಕೆ ಇಲಾಖೆ ಸಿಬ್ಬಂದಿ ಎಡವಟ್ಟು ಕಾರಣ ಎಂದು ರೈಲ್ವೆ ಸುರಕ್ಷಿತ ಆಯುಕ್ತರು ವರದಿ ಸಲ್ಲಿಸಿದ್ದಾರೆ,
ಜೂನ್ 2 ರಂದು ನಡೆದ ರೈಲುಗಳ ಅಪಘಾತಕ್ಕೆ ಎರಡು ಇಲಾಖೆ ಸಿಬ್ಬಂದಿ ಕಾರಣ. ರೈಲ್ವೆಯ ಸಿಗ್ನಲ್ ಮತ್ತು ಕಾರ್ಯನಿರ್ವಹಣೆ ಸಿಬ್ಬಂದಿ ಕಾರಣ ಎಂದು ರೈಲ್ವೆ ಆಯುಕ್ತರ ವರದಿಯಲ್ಲಿ ಸಿಬ್ಬಂದಿ ಎಡವಟ್ಟಿನ ಬಗ್ಗೆ ಉಲ್ಲೇಖಿಸಲಾಗಿದೆ.
ಸಿಬಿಐನಿಂದಲೂ ರೈಲು ದುರಂತದ ಬಗ್ಗೆ ತನಿಖೆ ಮುಂದುವರೆದಿದೆ. ರೈಲು ದುರಂತದ ಹಿಂದೆ ವಿಧ್ವಂಸಕ ಕೃತ್ಯದ ಶಂಕೆ ಹಿನ್ನೆಲೆಯಲ್ಲಿ ಸಿಬಿಐ ತನಿಖೆ ಕೈಗೊಳ್ಳಲಾಗಿದೆ. ರೈಲು ಅಪಘಾತದಲ್ಲಿ 290 ಜನ ಮೃತಪಟ್ಟಿದ್ದರು.
ಜೂನ್ 2 ರಂದು ಸಂಭವಿಸಿದ ತ್ರಿವಳಿ ರೈಲು ಅಪಘಾತಕ್ಕೆ ಮಾನವ ತಪ್ಪು ಕಾರಣ ಎಂದು ರೈಲ್ವೆ ಸುರಕ್ಷತಾ ಆಯುಕ್ತರು(CRS) ತಿಳಿಸಿದ್ದಾರೆ. ಆದಾಗ್ಯೂ, ಕೇಂದ್ರೀಯ ತನಿಖಾ ದಳ(ಸಿಬಿಐ) ನಡೆಸುತ್ತಿರುವ ಸಮಾನಾಂತರ ತನಿಖೆಯ ಮೇಲೆ ಪ್ರಭಾವ ಬೀರದಂತೆ ನೋಡಿಕೊಳ್ಳಲು ಮುಚ್ಚಿಟ್ಟಿರುವ ವರದಿಯಲ್ಲಿ ತೋರಿಸಿರುವ ದೋಷಗಳ ಕುರಿತು ಯಾವುದೇ ವಿವರಗಳನ್ನು ಬಹಿರಂಗಪಡಿಸಲು ಅಧಿಕಾರಿಗಳು ನಿರಾಕರಿಸಿದ್ದಾರೆ.
ವರದಿಯು ಮಾನವ ದೋಷವನ್ನು ಸ್ಪಷ್ಟವಾಗಿ ಎತ್ತಿ ತೋರಿಸಿದೆ. ವಿಧ್ವಂಸಕ ಕೃತ್ಯದ ಬಗ್ಗೆ ಸಿಬಿಐ ತನಿಖೆ ನಡೆಸುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸಿಆರ್ಎಸ್ ವರದಿಯನ್ನು ಅಪಘಾತ ಸಂಭವಿಸಿದ ವಿಭಾಗದ ಆಗ್ನೇಯ ರೈಲ್ವೆಯ(ಎಸ್ಇಆರ್) ಪ್ರಧಾನ ವ್ಯವಸ್ಥಾಪಕರಿಗೆ ಮತ್ತು ಅಧ್ಯಕ್ಷ ರೈಲ್ವೆ ಮಂಡಳಿ(ಸಿಆರ್ಬಿ) ಅನಿಲ್ ಕುಮಾರ್ ಲಹೋಟಿ ಅವರಿಗೆ ಇಮೇಲ್ ಮೂಲಕ ಬುಧವಾರ ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.