ಈ ಬಾರಿಯ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡು ತಿಂಗಳುಗಳೇ ಕಳೆಯುತ್ತಾ ಬಂದರೂ ಸಹ ಬಿಜೆಪಿ ಈವರೆಗೂ ವಿಪಕ್ಷ ನಾಯಕನ ಆಯ್ಕೆ ಮಾಡಿಲ್ಲ. ನಾಳೆಯಿಂದ ವಿಧಾನಮಂಡಲ ಅಧಿವೇಶನ ಆರಂಭವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಇಂದು ಸಂಜೆ ಅಥವಾ ನಾಳೆಯೊಳಗಾಗಿ ಬಿಜೆಪಿ ಹೈಕಮಾಂಡ್ ವಿಪಕ್ಷ ನಾಯಕನ ಹೆಸರು ಘೋಷಣೆ ಮಾಡುವ ಸಾಧ್ಯತೆ ಇದೆ.
ಇತ್ತೀಚೆಗೆ ನಡೆದ ಚುನಾವಣಾ ಫಲಿತಾಂಶದ ಪರಾಮರ್ಶನ ಸಭೆಯಲ್ಲಿ ಬಿಜೆಪಿ ನಾಯಕರುಗಳು ಪರಸ್ಪರರ ವಿರುದ್ಧ ಆರೋಪಗಳನ್ನು ಮಾಡಿದ್ದು, ಈ ವಿಚಾರ ಈಗ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ತೊಡಕುಂಟು ಮಾಡಿದೆ ಎಂದು ಹೇಳಲಾಗಿದೆ. ಯಾರನ್ನೇ ಆಯ್ಕೆ ಮಾಡಿದರೂ ಸಹ ವಿರೋಧಿ ಪಾಳೆಯ ಸದನದಲ್ಲಿ ಸಹಕಾರ ನೀಡಲಿದೆಯಾ ಎಂಬ ಆತಂಕ ಪಕ್ಷದ ನಾಯಕರನ್ನು ಕಾಡುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವರುಗಳಾದ ಅಶ್ವಥನಾರಾಯಣ, ಆರ್. ಅಶೋಕ್, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮೊದಲಾದವರು ವಿಧಾನಸಭೆ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ರೇಸ್ ನಲ್ಲಿದ್ದು, ಯಾರಿಗೆ ಅದೃಷ್ಟ ಒಲಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ. ಇಂದು ಸಂಜೆ ಅಥವಾ ನಾಳೆ ಬೆಳಿಗ್ಗೆಯೊಳಗಾಗಿ ವಿಪಕ್ಷ ನಾಯಕನ ಆಯ್ಕೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.