ಗಗನಕ್ಕೇರುತ್ತಿರುವ ಟೊಮೇಟೊ ಬೆಲೆ ಗೃಹಿಣಿಯರಿಗೆ ತಲೆನೋವು ತಂದಿದೆ. ದಿನನಿತ್ಯದ ಅಡುಗೆಗೆ ಟೊಮೆಟೋ ಬಳಸುವವರೆಲ್ಲ ಬೆಲೆ ಏರಿಕೆಯಿಂದ ಆತಂಕಕ್ಕೊಳಗಾಗಿದ್ದಾರೆ. ಜನಸಾಮಾನ್ಯರು ಇದೀಗ ಟೊಮೆಟೋಗೆ ಪರ್ಯಾಯವನ್ನು ಕಂಡುಕೊಂಡಿರೋದು ವಿಶೇಷ. ಟೊಮೆಟೋ ಬೆಲೆ ಕೆಜಿಗೆ 100 ರೂಪಾಯಿ ದಾಟಿರೋದ್ರಿಂದ ಜನರು ಅದರ ಬದಲು ಟೊಮೇಟೊ ಪ್ಯೂರಿ ಮತ್ತು ಟೊಮೆಟೋ ಸಾಸ್ನ ಸಣ್ಣ ಪ್ಯಾಕೆಟ್ಗಳನ್ನು ಬಳಸುತ್ತಿದ್ದಾರೆ.
ಶುಂಠಿಯ ಬದಲು ಶುಂಠಿ ಪೇಸ್ಟ್ನ ಸ್ಯಾಚೆಟ್ಗಳು ಮತ್ತು ಟೊಮೆಟೋ ಸ್ಯಾಚೆಟ್ಗಳ ಬಳಕೆ ವೇಗವಾಗಿ ಹೆಚ್ಚಿದೆ. ವಾರಗಳ ಹಿಂದೆ ಟೊಮೇಟೊ ಕೆಜಿಗೆ 60 ರೂಪಾಯಿಗೆ ಮಾರಾಟವಾಗುತ್ತಿತ್ತು. ಈಗ ಕೆಜಿಗೆ 125-140 ರೂಪಾಯಿಗೆ ತಲುಪಿದೆ. ಹಾಗಾಗಿ ಅಡುಗೆಗೆ ಗೃಹಿಣಿಯರು ಟೊಮೆಟೋ ಪ್ಯೂರಿಗಳನ್ನು ಬಳಸಲಾರಂಭಿಸಿದ್ದಾರೆ. 200 ಗ್ರಾಂ ತೂಕದ ಟೊಮೆಟೊ ಸಾಸ್ ಅಥವಾ ಪ್ಯೂರಿ ಕೇವಲ 25 ರೂಪಾಯಿಗೆ ಸಿಗುತ್ತದೆ.
ಟೊಮೆಟೋ ದುಬಾರಿಯಾದಾಗಿನಿಂದ ಟೊಮೆಟೊ ಸಾಸ್ಗೆ ಬೇಡಿಕೆ ಸಾಕಷ್ಟು ಹೆಚ್ಚಾಗಿದೆ. 800 ಗ್ರಾಂ ಟೊಮೆಟೊ ಸಾಸ್ ಪ್ಯಾಕ್ ಕೇವಲ 60 ರೂಪಾಯಿಗೆ ಸಿಗುವುದರಿಂದ ಜನರು ಅದೇ ಬೆಸ್ಟ್ ಎಂದುಕೊಳ್ಳುತ್ತಿದ್ದಾರೆ. ತಿಂಗಳ ಹಿಂದೆ ಜೀರಿಗೆ ಪುಡಿ ಕೆಜಿಗೆ 550 ರೂಪಾಯಿಗೆ ಮಾರಾಟವಾಗುತ್ತಿತ್ತು. ಆದರೆ ಈಗ ಅದರ ಬೆಲೆ ಕೆಜಿಗೆ 800 ರೂಪಾಯಿಗೆ ಏರಿದೆ. ವೆಜ್, ನಾನ್ವೆಜ್ ಹೀಗೆ ಎಲ್ಲಾ ಖಾದ್ಯಗಳಲ್ಲೂ ಜೀರಿಗೆ ಪುಡಿ ಬೇಕೇ ಬೇಕು. ಹಾಗಾಗಿಯೇ ಈಗ ಅಗ್ಗದ ಸ್ಯಾಚೆಟ್ ಪೌಡರ್ ಅನ್ನು ಬಳಸಲು ಜನರು ಪ್ರಾರಂಭಿಸಿದ್ದಾರೆ.
ವಿವಿಧ ಬ್ರಾಂಡ್ಗಳ 9 ಗ್ರಾಂ ಜೀರಿಗೆ ಪುಡಿಯ ಸ್ಯಾಚೆಟ್ಗಳು 5 ರೂಪಾಯಿಗೆ ಲಭ್ಯವಿವೆ. ಕಳೆದ ಎರಡು ತಿಂಗಳಿನಿಂದ ಶುಂಠಿ ಬೆಲೆ ಕೂಡ ಏರಿಕೆಯಾಗಿದೆ. ಕೆಜಿ ಶುಂಠಿ 300-350 ರೂಪಾಯಿಗೆ ಮಾರಾಟವಾಗುತ್ತಿದೆ. ಅದಕ್ಕಾಗಿಯೇ ಈಗ ಜನರು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಅನ್ನು ಬಳಸುತ್ತಿದ್ದಾರೆ. ಕೇವಲ 5 ರೂಪಾಯಿಗೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ನ ಸ್ಯಾಚೆಟ್ಗಳು ಸಿಗುತ್ತವೆ. ಖಾದ್ಯಗಳಲ್ಲಿ ಶುಂಠಿ ಮತ್ತು ಬೆಳ್ಳುಳ್ಳಿ ಎರಡನ್ನೂ ಸಮಪ್ರಮಾಣದಲ್ಲಿ ಬಳಸುವುದರಿಂದ ಸ್ಯಾಚೆಟ್ ಗಳನ್ನು ಖರೀದಿಸುವುದು ಜಾಣತನ.