ಪಾರಿಜಾತವನ್ನು ದೇವಲೋಕದ ಪುಷ್ಪ ಎಂದೇ ಕರೆಯಲಾಗುತ್ತದೆ. ಸ್ವರ್ಗದಿಂದ ಇದನ್ನು ಶ್ರೀ ಕೃಷ್ಣ ಸತ್ಯಭಾಮೆಗೆಂದೇ ಭೂಲೋಕಕ್ಕೆ ತಂದನಂತೆ.
ಸಾಮಾನ್ಯವಾಗಿ ನೆಲದ ಮೇಲೆ ಬಿದ್ದ ಹೂವನ್ನು ದೇವರಿಗೆ ಮುಡಿಸುವುದಿಲ್ಲ. ಆದರೆ ಪಾರಿಜಾತಕ್ಕೇ ಈ ವಿಷಯದಲ್ಲಿ ವಿನಾಯಿತಿ ಇದೆ. ಸಂಜೆ ಅರಳಿ ಮುಂಜಾನೆ ಉದುರಿಹೋಗುವ ಈ ಹೂವು ನೋಡಲು ಆಕರ್ಷಕ, ಸುಗಂಧವೂ ಅಸಾಮಾನ್ಯ.
ಕೇಸರಿ ತೊಟ್ಟು, ಬಿಳಿ ಪಕಳೆಗಳ ಈ ಸುಂದರ ಹೂವಿಂದ ಅನೇಕ ಆರೋಗ್ಯಕರ ಪ್ರಯೋಜನ ಇದೆ. ಈ ಹೂವನ್ನು ಚೆನ್ನಾಗಿ ಅರೆದು ಮುಖಕ್ಕೆ ಲೇಪಿಸಿ ಅರ್ಧ ಗಂಟೆ ನಂತರ ಬೆಚ್ಚಗಿನ ನೀರಿನಿಂದ ಮುಖ ತೊಳೆದರೆ ಹೊಳಪಿನ, ನುಣುಪಾದ ತ್ವಚೆ ನಿಮ್ಮದಾಗುತ್ತದೆ.
ಪಾರಿಜಾತ ಮರದ ತೊಗಟೆಯ ಕಷಾಯದಿಂದ ಗಾಯಗಳನ್ನು ತೊಳೆದರೆ ಗಾಯ ಬೇಗ ಮಾಯುತ್ತದೆ.
ಪಾರಿಜಾತ ಹೂವು ಹಾಗೂ ತೊಗಟೆಯಷ್ಟೇ ಇದರ ಎಲೆಯೂ ಪ್ರಯೋಜನಕಾರಿ. ಪಾರಿಜಾತದ ಎಲೆಯ ರಸ ಜಂತುಹುಳಗಳ ನಿವಾರಣೆಗೆ ರಾಮಬಾಣದಂತೆ ಕೆಲಸ ಮಾಡುತ್ತದೆ.