ಅಯ್ಯೋ ನನ್ನ ತೂಕ ಇಷ್ಟು ಜಾಸ್ತಿ ಆಗಿದೆಯಾ ? ಇನ್ನು ನಾನು ಸಣ್ಣ ಆಗಲೇಬೇಕು ಅನ್ನೋದು ಇತ್ತೀಚೆಗೆ ಹದಿಹರೆಯದ ತೊಳಲಾಟ. ಸಣ್ಣ ಆಗ್ಬೇಕು ಅಂತ ಅಂದುಕೊಂಡ ಕೂಡಲೇ ಮಾಡುವ ಮೊದಲ ಕೆಲಸ ಅನ್ನ ತಿನ್ನುವುದನ್ನು ಬಿಟ್ಟು ಬಿಡುವುದು.
ಅನ್ನ ತಿನ್ನೋದು ಬಿಟ್ಟರೆ ಸಣ್ಣ ಆಗ್ತೇವೆ ಅಂದುಕೊಳ್ಳುವುದು ದೊಡ್ಡ ತಪ್ಪು. ಭಾರತೀಯರಿಗೆ ಅದರಲ್ಲೂ ದಕ್ಷಿಣ ಭಾರತದವರಿಗೆ ಅನ್ನವೇ ಪ್ರಧಾನ ಆಹಾರ. ಅನ್ನ ಪರಬ್ರಹ್ಮ ಸ್ವರೂಪ ಎಂದೇ ನಮ್ಮ ಹಿರಿಯರು ಹೇಳುತ್ತಿದ್ದು ಇಲ್ಲಿ ನೆನಪು ಮಾಡಿಕೊಳ್ಳಬಹುದು. ಅನ್ನಕ್ಕೆ ಇಷ್ಟು ಮಹತ್ವ ಕೊಟ್ಟ ಮೇಲೆ ಅದು ಆರೋಗ್ಯಕ್ಕೆ ಸಮಸ್ಯೆ ಹೇಗೆ ಉಂಟುಮಾಡಬಹುದು ?
ಇತ್ತೀಚೆಗೆ ಬಹುತೇಕ ಎಲ್ಲರೂ ಪಾಲಿಶ್ ಮಾಡಿದ ಅಕ್ಕಿಯನ್ನೇ ಉಪಯೋಗಿಸುವುದು ರೂಢಿ. ಈ ಪಾಲಿಶ್ ಮಾಡಿದ ಅಕ್ಕಿಯಲ್ಲಿ ಸತ್ವಗಳೆಲ್ಲಾ ನಶಿಸಿಹೋಗಿ ಇಂತಹ ಅನ್ನ ತಿಂದರೂ ದೇಹಕ್ಕೆ ಬೇಕಾದ ಯಾವುದೇ ಪೋಷಕಾಂಶ ಸಿಗುವುದಿಲ್ಲ. ಅನ್ನ ತಿನ್ನುವುದನ್ನು ಬಿಡದೇ ಡಯೆಟ್ ಮಾಡಬೇಕು ಎನ್ನುವವರಿಗೆ ಪಾಲಿಶ್ ಮಾಡದ ಅಕ್ಕಿ ಬೆಸ್ಟ್. ಅದರಲ್ಲೂ ಕುಚಲಕ್ಕಿ, ಕೆಂಪಕ್ಕಿ, ಕಪ್ಪಕ್ಕಿ ಇವುಗಳನ್ನು ಯಾವುದೇ ಆತಂಕವಿಲ್ಲದೆ ಬಳಸಬಹುದು.
ಡಯಟ್ ನಲ್ಲಿ ಇರುವವರು ಅನ್ನದ ಪ್ರಮಾಣವನ್ನು ಅರ್ಧಕ್ಕೆ ಇಳಿಸಿ ಬದಲಿಗೆ ಹೆಚ್ಚು ತರಕಾರಿ, ಸೊಪ್ಪು ಹಾಗೂ ಹಣ್ಣುಗಳನ್ನು ಸೇವನೆ ಮಾಡಿದರೆ ಸಮತೋಲನ ಕಾಯ್ದುಕೊಳ್ಳಬಹುದು. ಡಯಟ್ ಮಾಡಿದ ಸಮಾಧಾನ, ಅನ್ನ ತಿನ್ನುವ ಖುಷಿ ಎರಡನ್ನೂ ಎಂಜಾಯ್ ಮಾಡ್ತಾ ಸಪೂರ ಆಗುವ ಪ್ರಯತ್ನವನ್ನು ಮುಂದುವರೆಸಬಹುದು.