ಮಂಗಳೂರು : ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನಕ್ಕೆ ಎನ್ ಐ ಎ ( NIA) ತೀವ್ರ ಶೋಧ ನಡೆಸುತ್ತಿದೆ.
ತಲೆಮರೆಸಿಕೊಂಡ ಆರೋಪಿಗಳು ಅರಬ್ ರಾಷ್ಟ್ರದಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ನೇಪಾಳದ ಮೂಲಕ ವಿವಿಧ ಅರಬ್ ದೇಶಗಳಿಗೆ ತಲೆಮರೆಸಿಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಉಮರ್ ಫಾರುಕ್, ಅಬುಬಕರ್ ಸಿದ್ದಿಕ್,ಮೊಹಮ್ಮದ್ ಮುಸ್ತಾಫಾ, ತುಘೈಲ್ ಎಂಬ ಆರೋಪಿಗಳಿಗೆ ಎನ್ ಐ ಎ ತೀವ್ರ ಶೋಧ ನಡೆಸುತ್ತಿದೆ. ನಾಲ್ವರ ಪತ್ತೆಗೆ ಒಟ್ಟು 14 ಲಕ್ಷ ರೂ ಬಹುಮಾನ ಘೋಷಣೆ ಮಾಡಲಾಗಿದೆ.‘ಪ್ರವೀಣ್ ನೆಟ್ಟಾರು’ ಹತ್ಯೆ ಆರೋಪಿಗಳು ಕೋರ್ಟ್ ಗೆ ಶರಣಾಗದಿದ್ದರೆ ಮನೆ ಜಪ್ತಿ ಮಾಡಲಾಗುತ್ತದೆ ಎಂದು ಎನ್ ಐ ಎ ( NIA) ಖಡಕ್ ಎಚ್ಚರಿಕೆ ನೀಡಿದೆ.
ಜೂನ್ 30 ರ ಒಳಗೆ ಆರೋಪಿಗಳು ಎನ್ ಐ ಎ ನ್ಯಾಯಾಲಯಕ್ಕೆ ಹಾಜರಾಗಬೇಕು, ಇಲ್ಲವಾದಲ್ಲಿ ಮನೆ ಜಪ್ತಿ ಮಾಡಲಾಗುತ್ತದೆ ಎಂದು ಎನ್ ಐ ಎ ಕೋರ್ಟ್ ಖಡಕ್ ಎಚ್ಚರಿಕೆ ನೀಡಿದೆ.ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ಎನ್ ಐ ಎ ಅಧಿಕಾರಿಗಳು ಕೈಗೆತ್ತಿಕೊಂಡು ತನಿಖೆ ನಡೆಸುತ್ತಿದ್ದು, ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಷೇಧಿತ ಪಿಎಫ್ಐ ಸಂಘಟನೆಯ ಕಾರ್ಯಕರ್ತರ ಮನೆ ಮೇಲೆ ದಾಳಿ ನಡೆಸಿದ್ದರು.
ಜುಲೈ 26ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪೆರುವಾಜೆ ಕ್ರಾಸ್ ಬಳಿ ಚಿಕನ್ ಅಂಗಡಿ ನಡೆಸುತ್ತಿದ್ದ 31 ವರ್ಷದ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಅವರನ್ನು ಬೈಕ್ನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದರು.