ಪ್ರತಿ ದಿನದ ಬೆಳಗು ಈಗ ಕೋಳಿ ಕೂಗಿ ಆಗೋದಲ್ಲ, ಪ್ರೆಷರ್ ಕುಕ್ಕರ್ ನ ಶಿಳ್ಳೆ ಇಂದ ಆಗತ್ತೆ ಅನ್ನೋದು ನೂರಕ್ಕೆ ನೂರರಷ್ಟು ನಿಜ. ನಗರವಾಸಿಗಳ ಅಡುಗೆಮನೆಯ ಪರಿಕರಗಳಲ್ಲಿ ಕುಕ್ಕರ್ ದೊಡ್ಡಣ್ಣ ಇದ್ದ ಹಾಗೆ. ಅದಿಲ್ಲದೆ ಹೋದರೆ ಅಡುಗೆ ತಿಂಡಿ ತಯಾರು ಆಗೋದೇ ಇಲ್ಲ ಎನ್ನುವಷ್ಟರ ಮಟ್ಟಿಗೆ ನಾವು ಕುಕ್ಕರ್ ಮೇಲೆ ಅವಲಂಬಿತರಾಗಿದ್ದೇವೆ.
ಕುಕ್ಕರ್ ಕೇವಲ ನಗರಗಳಲ್ಲಿ ಅಷ್ಟೇ ಅಲ್ಲ, ಹಳ್ಳಿಮನೆಗಳಲ್ಲೂ ಲಗ್ಗೆ ಇಟ್ಟಿದೆ. ಒಮ್ಮೆಲೆ ಎರಡು ಮೂರು ಪದಾರ್ಥಗಳನ್ನು ಒಟ್ಟಿಗೆ ಬೇಯಿಸಬಹುದು, ಕಡಿಮೆ ಗ್ಯಾಸ್ ನಲ್ಲಿ ಬಹಳ ಬೇಗ ಆಹಾರ ಪದಾರ್ಥ ಬೇಯುತ್ತೆ, ಒಮ್ಮೆ ಬೇಯಿಸಬೇಕಾದ ಪದಾರ್ಥಗಳನ್ನು ಕುಕ್ಕರ್ ಒಳಗೆ ಹಾಕಿ ಮುಚ್ಚಳ ಮುಚ್ಚಿದರೆ ಸಾಕು, ಮತ್ತೆ ಅದು ಮೂರು ಬಾರಿ ಕೂಗಿಕೊಂಡಾಗಷ್ಟೇ ಗಮನ ಕೊಟ್ಟರಾಯಿತು. ಹೀಗೆ ಕುಕ್ಕರ್ ನ ಕಲ್ಯಾಣ ಗುಣಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಇಷ್ಟೆಲ್ಲಾ ಪ್ರಯೋಜನ ಇರುವ ಕುಕ್ಕರ್ ಇಂದ ತೊಂದರೆಯೂ ಇದೆ. ಇಂಧನ, ಸಮಯ ಉಳಿತಾಯವಾಗೋದು ಎಷ್ಟು ನಿಜವೋ ಅಷ್ಟೇ ಆರೋಗ್ಯ ವ್ಯಯವಾಗುವುದೂ ಸತ್ಯ.
ಪ್ರೆಷರ್ ಕುಕ್ಕರ್ ನಲ್ಲಿ ಅತೀ ಹೆಚ್ಚಿನ ಒತ್ತಡದಿಂದ ಅಡುಗೆ ತಯಾರಾಗುವ ಕಾರಣ ಆಹಾರ ಪದಾರ್ಥದ ಪೋಷಕಾಂಶಗಳು ಬಹಳ ಬೇಗ ನಶಿಸಿ ಹೋಗುತ್ತದೆ ಎಂಬುದು ತಜ್ಞರ ನಿಲುವು. ಪೋಷಕಾಂಶಗಳೇ ಇಲ್ಲದ ಆಹಾರ ತಿಂದರೆ ಯಾವ ಸತ್ವವೂ ದೇಹಕ್ಕೆ ಸಿಗುವುದಿಲ್ಲ. ಹಾಗಾಗಿ ಹೆಚ್ಚು ಸಮಯಾವಕಾಶ ಸಿಕ್ಕಾಗೆಲ್ಲಾ ಕುಕ್ಕರ್ ಬದಲು ಪಾತ್ರೆಯಲ್ಲಿ ಅಡುಗೆ ತಯಾರು ಮಾಡಿ. ಆದಷ್ಟು ಸಾವಧಾನವಾಗಿ, ಆಸ್ಥೆಯಿಂದ ತಯಾರಾದ ಅಡುಗೆ ಆರೋಗ್ಯಕ್ಕೂ ಒಳ್ಳೆಯದೇ.