ಬೆಂಗಳೂರು: ಬಿಜೆಪಿ ಸರ್ಕಾರ ಅವಧಿಯಲ್ಲಿ ನಿಲ್ಲಿಸಿದ್ದ ಕೃಷಿ ಭಾಗ್ಯ ಯೋಜನೆ ಮರು ಜಾರಿಗೆ ಕಾಂಗ್ರೆಸ್ ಸರ್ಕಾರ ಸಿದ್ಧತೆ ನಡೆಸಿದೆ.
ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಳೆಯಾಶ್ರಿತ ರೈತರ ಅನುಕೂಲಕ್ಕೆ ಕೃಷಿ ಭಾಗ್ಯ ಯೋಜನೆ ಜಾರಿಗೊಳಿಸಿದ್ದು, ಶೇಕಡ 80ಕ್ಕೂ ಅಧಿಕ ಈ ಯೋಜನೆ ಯಶಸ್ವಿಯಾಗಿದೆ. ಯೋಜನೆಯನ್ನು ಮುಂದುವರೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ. ರಾಜ್ಯದಲ್ಲಿ ಶೇಕಡ 68 ರಷ್ಟು ಮಳೆಯಾಶ್ರಿತ ಕೃಷಿ ಇದ್ದು, ಶೇಕಡ 55 ರಷ್ಟು ಆಹಾರ ಧಾನ್ಯ, ಶೇಕಡ 75ರಷ್ಟು ಎಣ್ಣೆಕಾಳು ಬೆಳೆಗಳ ಉತ್ಪಾದನೆಯಾಗುತ್ತದೆ. ಜಮೀನುಗಳಲ್ಲಿ ಕೃಷಿ ಹೊಂಡ ನಿರ್ಮಿಸಿ ಮಳೆ ನೀರು ಪೋಲಾಗದಂತೆ ನೀರು ಸಂಗ್ರಹಿಸಿ ರಕ್ಷಣಾತ್ಮಕ ನೀರಾವರಿ ಕಲ್ಪಿಸುವುದು ಯೋಜನೆಯ ಉದ್ದೇಶವಾಗಿದೆ.
ಬಜೆಟ್ ಸಿದ್ಧತೆ ಸಭೆಯಲ್ಲಿ ಕೃಷಿ ಸಚಿವ ಚೆಲುವರಾಯಸ್ವಾಮಿ ಕೃಷಿ ಭಾಗ್ಯ ಯೋಜನೆ ಬಗ್ಗೆ ಪ್ರಸ್ತಾಪಿಸಿದ್ದು, ಇದಕ್ಕೆ ಸಿಎಂ ಸ್ಪಂದಿಸಿದ್ದಾರೆ ಎಂದು ಹೇಳಲಾಗಿದೆ. ಪ್ಯಾಕೇಜ್ ರೂಪದಲ್ಲಿ ಕೃಷಿ ಭಾಗ್ಯ ಯೋಜನೆ ಜಾರಿಗೊಳಿಸಿ, ಪಾಲಿಥಿನ್ ಹೊದಿಕೆ, ಕೃಷಿ ಹೊಂಡ ನಿರ್ಮಾಣ, ಡೀಸೆಲ್ ಪಂಪ್ಸೆಟ್, ಲಘು ನೀರಾವರಿ ಘಟಕ, ಬದು ನಿರ್ಮಾಣ, ಬೆಳೆ ಪದ್ಧತಿ, ಪಶು ಸಂಗೋಪನಾ ಚಟುವಟಿಕೆ ಮೊದಲಾದವುಗಳನ್ನು ಒಳಗೊಂಡಂತೆ ಕೃಷಿ ಭಾಗ್ಯ ಯೋಜನೆ ಮರು ಜಾರಿ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಹೇಳಲಾಗಿದೆ.