ಬಳ್ಳಾರಿ: ಗೃಹಜ್ಯೋತಿ ಯೋಜನೆ ಜುಲೈನಿಂದಲೇ ಅನುಷ್ಠಾನಗೊಳಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.
ಬಳ್ಳಾರಿ ತಾಲೂಕು ಕುಡತಿನಿ ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ ಭೇಟಿ ನೀಡಿದ ಅವರು, 200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡಿದರೆ ಉಚಿತವಾಗಿರುತ್ತದೆ. ಹೆಚ್ಚಿನ ಯೂನಿಟ್ ಬಳಸಿದಲ್ಲಿ ಬಿಲ್ ಪಾವತಿಸಬೇಕಾಗುತ್ತದೆ. ಜುಲೈನಿಂದ ಉಚಿತ ವಿದ್ಯುತ್ ಸೌಲಭ್ಯ ಸಿಗಲಿದ್ದು, ಆಗಸ್ಟ್ ತಿಂಗಳಿನಿಂದಲೇ ಜನರಿಗೆ ಶೂನ್ಯ ಬಿಲ್ ಬರಲಿದೆ. ರಾಜ್ಯದಲ್ಲಿ 2.16 ಕೋಟಿ ಜನ ಗೃಹಜ್ಯೋತಿ ಫಲಾನುಭವಿಗಳಿದ್ದು, ಅದರಲ್ಲಿ 2.14 ಕೋಟಿ ಅರ್ಹರಿದ್ದಾರೆ ಎಂದು ತಿಳಿಸಿದ್ದಾರೆ.
ವಿದ್ಯುತ್ ದರ ಹೆಚ್ಚಳಕ್ಕೂ ಗೃಹಜ್ಯೋತಿ ಯೋಜನೆಗೂ ಸಂಬಂಧವಿಲ್ಲ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ದರ ಹೆಚ್ಚಳ ಮಾಡಿದೆ. ಸೆಪ್ಟೆಂಬರ್ ನಲ್ಲಿ ದರ ಏರಿಕೆ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಮೇ 12 ರಿಂದಲೇ ವಿದ್ಯುತ್ ದರ ಹೆಚ್ಚಳ ಮಾಡಲಾಗಿದೆ ಎಂದು ಹೇಳಿದ್ದಾರೆ.
ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಒತ್ತು ನೀಡಲಾಗುವುದು. ಮುಂಗಾರು ವಿಳಂಬದಿಂದ ವಿದ್ಯುತ್ ಉತ್ಪಾದನೆಗೆ ಸಮಸ್ಯೆಯಾಗಿಲ್ಲ. ಮುಂದಿನ ದಿನಗಳಲ್ಲಿ ಮಳೆಯಾಗುವ ಆಶಾಭಾವನೆ ಇದೆ. ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಚಾರ್ಜಿಂಗ್ ಸ್ಟೇಷನ್ ಗಳನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ. ಇರುವ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳನ್ನು ಬಲಪಡಿಸಲಾಗುವುದು. ಯಾವುದೇ ರೀತಿ ಶಾಖೋತ್ಪನ್ನ ಕೇಂದ್ರಗಳನ್ನು ಮುಚ್ಚುವುದಿಲ್ಲ. ಸೌರ ವಿದ್ಯುತ್ ಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಕಲ್ಲಿದ್ದಲಿನ ಗುಣಮಟ್ಟ ಕಾಯ್ದುಕೊಳ್ಳಲು ತಿಳಿಸಲಾಗಿದೆ ಎಂದು ಹೇಳಿದ್ದಾರೆ.