ರಾಮನಗರ : ಬೆಸ್ಕಾಂ ನವರು ಮನೆ ಮನೆಗೆ ತೆರಳಿ ಗೃಹಜ್ಯೋತಿ ನೋಂದಣಿ ಮಾಡಿಸಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೆಡಿಪಿ ಸಭೆಯಲ್ಲಿ ಭಾಗಿಯಾದ ಡಿಸಿಎಂ ಡಿಕೆ ಶಿವಕುಮಾರ್ ಈಗಾಗಲೇ ಗೃಹ ಜ್ಯೋತಿ ಯೋಜನೆಯಡಿ ನೀಡುವ ಉಚಿತ ವಿದ್ಯುತ್ ಯೋಜನೆಗೆ ಜನರು ಅರ್ಜಿ ಸಲ್ಲಿಸುತ್ತಿದ್ದು, ಬೆಸ್ಕಾಂ ನವರು ಮನೆ ಮನೆಗೆ ತೆರಳಿ ಪ್ರಚಾರ ನಡೆಸಿ ಗೃಹಜ್ಯೋತಿ ನೋಂದಣಿ ಮಾಡಿಸಬೇಕು. ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಮಾಡಿದ್ದು ನಾವಲ್ಲ, ಬಿಜೆಪಿ ಸರ್ಕಾರ. ಬಿಜೆಪಿಯವರು ತಿಂದು ನಮ್ಮ ಮೂತಿಗೆ ಒರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.
ಇನ್ನೂ, ಉಚಿತ ವಿದ್ಯುತ್ ನೀಡುವ ಘೋಷಣೆಯಂತೆ ರಾಜ್ಯ ಸರ್ಕಾರ ‘ಗೃಹಜ್ಯೋತಿ’ ಯೋಜನೆಯನ್ನು ಜಾರಿಗೊಳಿಸಿದ್ದು, ಇದಕ್ಕಾಗಿ ನೋಂದಾಯಿಸಲು ಸೂಚನೆ ನೀಡಲಾಗಿದೆ. ಆನ್ಲೈನ್ ಮೂಲಕ, ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ಬೆಂಗಳೂರು ಒನ್ ಕೇಂದ್ರಗಳಲ್ಲಿ ಇದರ ನೋಂದಣಿ ಮಾಡಬಹುದಾಗಿದೆ.ಗೃಹಜ್ಯೋತಿ ನೋಂದಣಿ ಸಂಪೂರ್ಣವಾಗಿ ಉಚಿತವಾಗಿದ್ದು, ಆದರೆ ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ಬೆಂಗಳೂರು ಒನ್ ಕೇಂದ್ರಗಳಲ್ಲಿ 20 ರೂಪಾಯಿ ಸೇವಾ ಶುಲ್ಕವನ್ನು ವಿಧಿಸಲು ಸೂಚನೆ ನೀಡಲಾಗಿದೆ ಇದರ ಮಧ್ಯೆಯೂ ನಿಗದಿತಕ್ಕಿಂತ ಹೆಚ್ಚು ಶುಲ್ಕ ವಸೂಲಿ ಮಾಡುತ್ತಿರುವ ಹಲವು ದೂರುಗಳು ಕೇಳಿ ಬಂದಿದ್ದವು.ಈ ಹಿನ್ನೆಲೆಯಲ್ಲಿ ಹೆಚ್ಚಿನ ಹಣ ವಸೂಲಿ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವ ಖಡಕ್ ಎಚ್ಚರಿಕೆಯನ್ನು ಸರ್ಕಾರ ನೀಡಿದ್ದು, ಈ ರೀತಿ ಹಣ ಕೇಳಿದರೆ ಸಾರ್ವಜನಿಕರು ಸಹ 1912 ಸಹಾಯವಾಣಿಗೆ ಕರೆ ಮಾಡುವ ಮೂಲಕ ದೂರು ನೀಡಬಹುದಾಗಿದೆ.