ಪಶ್ಚಿಮ ಬಂಗಾಳದ ದಕ್ಷಿಣ 24-ಪರಗಣ ಜಿಲ್ಲೆಯ ಸೋನಾರ್ಪುರದಲ್ಲಿ ಮಹಿಳೆಯೊಬ್ಬರು ನಿಗೂಢವಾಗಿ ಕಣ್ಮರೆಯಾದ ಮೂರು ವರ್ಷಗಳ ನಂತರ ರಾಜ್ಯದ ಅಪರಾಧ ತನಿಖಾ ಇಲಾಖೆ (ಸಿಐಡಿ) ಸೆಪ್ಟಿಕ್ ಟ್ಯಾಂಕ್ನಿಂದ ಆಕೆಯ ಅಸ್ಥಿಪಂಜರವನ್ನು ಹೊರತೆಗೆದು ಕೊಲೆ ಮಾಡಿದ ಆಕೆಯ ಪತಿಯನ್ನು ಬಂಧಿಸಿದೆ.
ಮಾಧ್ಯಮ ವರದಿಗಳ ಪ್ರಕಾರ ಮಹಿಳೆಯ ಪತಿಯನ್ನ ಸಿಐಡಿ ತೀವ್ರ ವಿಚಾರಣೆ ನಡೆಸಿದ ಬಳಿಕ ಅಪರಾಧವನ್ನ ತಪ್ಪೊಪ್ಪಿಕೊಂಡಿದ್ದಾನೆ.
ತುಂಪಾ ಮಂಡಲ್ ಎಂಬ ಮಹಿಳೆ ಮಾರ್ಚ್ 2020 ರಲ್ಲಿ ನಾಪತ್ತೆಯಾಗಿದ್ದರು. ನಂತರ ಆಕೆಯ ತಂದೆ ಲಕ್ಷ್ಮಣ್ ಹಲ್ದರ್ ಅವರು ಸ್ಥಳೀಯ ಪೊಲೀಸರಲ್ಲಿ ಕಾಣೆಯಾದ ದೂರನ್ನು ದಾಖಲಿಸಿದ್ದರು.
ಪ್ರಾಥಮಿಕ ತನಿಖೆಯ ನಂತರ ಪೊಲೀಸರು ಮಹಿಳೆಯ ಪತಿ ಭೋಂಬಲ್ ಮಂಡಲ್ ಅವರನ್ನು ಏಪ್ರಿಲ್ 2020 ರಲ್ಲಿ ಬಂಧಿಸಿದರು. ಅವರ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ನ್ಯಾಯಾಲಯವು ಆತನಿಗೆ ಜಾಮೀನು ನೀಡಿತು.
ತುಂಪಾ ಮಂಡಲ್ ಅವರ ತಂದೆ ನಂತರ ಕೋಲ್ಕತ್ತಾ ಹೈಕೋರ್ಟ್ಗೆ ಮೊರೆ ಹೋಗಿ ಪ್ರಕರಣದ ಕುರಿತು ಹೆಚ್ಚಿನ ತನಿಖೆಯನ್ನು ಉನ್ನತ ತನಿಖಾ ಸಂಸ್ಥೆಯಿಂದ ನಡೆಸುವಂತೆ ಕೋರಿದರು. ನಂತರ ಪ್ರಕರಣವನ್ನು ಪಶ್ಚಿಮ ಬಂಗಾಳ ಸಿಐಡಿಗೆ ಹಸ್ತಾಂತರಿಸಲಾಯಿತು.
ಘಟನೆಯ ತನಿಖೆಯನ್ನು 2020 ಜುಲೈ 13 ರಂದು ಸಿಐಡಿ ವಹಿಸಿಕೊಂಡು ಮೃತ ಮಹಿಳೆಯ ಪತಿಯನ್ನು ಮತ್ತೆ ವಿಚಾರಣೆ ನಡೆಸಿತು.
ತೀವ್ರ ವಿಚಾರಣೆ ನಂತರ ಭೋಂಬಲ್ ಮಂಡಲ್ ತನ್ನ ಹೆಂಡತಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡನು ಮತ್ತು ಆಕೆಯ ದೇಹವನ್ನು ಸೆಪ್ಟಿಕ್ ಟ್ಯಾಂಕ್ನಲ್ಲಿ ಹಾಕಿದ್ದಾಗಿ ಬಹಿರಂಗಪಡಿಸಿದ್ದ.
ಸಿಐಡಿಯು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 ರ ಅಡಿಯಲ್ಲಿ ಭೋಂಬಲ್ ಮಂಡಲ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದೆ.
ವರದಿಯ ಪ್ರಕಾರ 2020 ರಲ್ಲಿ ಸೋನಾರ್ಪುರದ ಬಾಡಿಗೆ ಮನೆಯಲ್ಲಿ ದಂಪತಿಗಳು ವಾಸಿಸುತ್ತಿದ್ದಾಗ ತನ್ನ ಹೆಂಡತಿಯನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಂದು ನಂತರ ಶವವನ್ನು ಸೆಪ್ಟಿಕ್ ಟ್ಯಾಂಕ್ಗೆ ಎಸೆದಿದ್ದಾನೆ ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ.
ಸಿಐಡಿ ನೇತೃತ್ವದಲ್ಲಿ ನಡೆದ ಶೋಧ ಕಾರ್ಯಾಚರಣೆಯಲ್ಲಿ ಆರೋಪಿ ಬಹಿರಂಗಪಡಿಸಿದ ಸ್ಥಳದಲ್ಲಿ ಸೆಪ್ಟಿಕ್ ಟ್ಯಾಂಕ್ನಿಂದ ಮಹಿಳೆಯ ಅಸ್ಥಿಪಂಜರ ಮತ್ತು ಆಭರಣಗಳು ಪತ್ತೆಯಾಗಿವೆ. ವಿವಾಹೇತರ ಸಂಬಂಧದ ಶಂಕೆಯಿಂದ ಆರೋಪಿ ಪತ್ನಿಯನ್ನು ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ.